

ಮಂಗಳೂರು: ಕಾಂಗ್ರೆಸ್ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವಿರುದ್ಧ ಆ.22 ಸಂಜೆಯೊಳಗೆೆ ಎಫ್‌ಐಆರ್ ದಾಖಲಿಸದಿದ್ದರೆ ಜಿಲ್ಲಾದ್ಯಂತ ಹೋರಾಟ ನಡೆಸುವುದಾಗಿ ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದೆ.
ಪ್ರಚೋದನಕಾರಿ ಭಾಷಣ ವಿರುದ್ಧ ಐವನ್ ಡಿಸೋಜ ಮೇಲೆ ಕೇಸು ದಾಖಲಿಸುವಂತೆ ಆಗ್ರಹಿಸಿ ಯುವ ಮೋರ್ಚಾ ವತಿಯಿಂದ ಬರ್ಕೆ ಪೊಲೀಸರಿಗೆ ಮಂಗಳವಾರ ದೂರು ನೀಡಲಾಗಿತ್ತು. ಅಲ್ಲದೆ 48 ಗಂಟೆಗಳೊಳಗೆ ದೂರು ದಾಖಲಿಸದಿದ್ದರೆ, ಠಾಣೆಗೆ ಮುತ್ತಿಗೆ ಹಾಕುವುದಾಗಿ ಯುವ ಮೋರ್ಚಾ ಮುಖಂಡರು ಹೇಳಿದ್ದರು.
ನಿಗದಿತ ಮುತ್ತಿಗೆ ಕೈಬಿಟ್ಟರು:
ಬುಧವಾರ ಮಧ್ಯಾಹ್ನ ವರೆಗೂ ಬರ್ಕೆ ಠಾಣೆ ಪೊಲೀಸರು ಐವನ್ ಡಿಸೋಜ ವಿರುದ್ಧ ಕೇಸು ದಾಖಲಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಯುವ ಮೋರ್ಚಾ ಸಂಜೆ ಠಾಣೆಗೆ ಮುತ್ತಿಗೆ ನಡೆಸುವುದಾಗಿ ತಿಳಿಸಿತ್ತು. ಅದರಂತೆ ನಿಗದಿತ ಅರ್ಧ ಗಂಟೆ ಬಳಿಕ ಯುವ ಮೋರ್ಚಾ
ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬರ್ಕೆ ಠಾಣೆಗೆ ಆಗಮಿಸಿದರು. ಆದರೆ ಠಾಣೆಗೆ ಮುತ್ತಿಗೆ ಬದಲು ಮತ್ತೊಮ್ಮೆ ಮಾತುಕತೆ ನಡೆಸಲು ಆಗಮಿಸಿರುವುದಾಗಿ ತಿಳಿಸಿದರು. ಬಳಿಕ ಠಾಣೆಯೊಳಗೆ ತೆರಳಿ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಜೊತೆ ಮಾತುಕತೆ ನಡೆಸಿದರು.
ಇಂದು ಕೊನೆ ಗಡುವು:
ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಮಾತನಾಡಿ, ಯುವ ಮೋರ್ಚಾದಿಂದ ಐವನ್ ಡಿಸೋಜಾ ವಿರುದ್ಧ ದೂರು ನೀಡಿ 48 ಗಂಟೆ ಕಳೆದಿದೆ. ಠಾಣೆಯಿಂದ ಹಿಂಬರಹ ನೀಡಿದ್ದು ಬಿಟ್ಟರೆ ಎಫ್‌ಐಆರ್ ದಾಖಲಾಗಿಲ್ಲ. ಐವನ್ ಡಿಸೋಜ ಅವರು ಪ್ರಚೋದನಾಕಾರಿ ಮಾತನಾಡಿದ ಕಾರಣ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಸ್‌ಗೆ ಕಲ್ಲು ತೂರಾಟದಂತಹ ಘಟನೆಗಳು ನಡೆದಿವೆ. ಕಲ್ಲು ತೂರಾಟ ಮಾಡಿದವರನ್ನು ಕೇವಲ ಠಾಣಾ ಜಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಇದು ಅಹಿತಕರ ಘಟನೆಗೆ ನಡೆಸಿದವರ ಮೇಲೆ ಪೊಲೀಸರು ಏನೂ ಕ್ರಮಕೈಗೊಳ್ಳುತ್ತಿಲ್ಲ ಎಂಬ ತಪ್ಪು ಸಂದೇಶಕ್ಕೆ ಕಾರಣವಾಗುತ್ತದೆ. ಹಾಗಾಗಿ ಕೂಡಲೇ ಐವನ್ ಡಿಸೋಜ ಮೇಲೆ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಅರುಣ್ ಶೇಟ್ ಮಾತನಾಡಿ, ಪೊಲೀಸರ ಎದುರಿನಲ್ಲೇ ಐವನ್ ಡಿಸೋಜ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಇದಕ್ಕೆ ಬೇಕಾದ ಎಲ್ಲ ಸಾಕ್ಷೃ ಕೂಡ ಪೊಲೀಸರಲ್ಲಿ ಇದೆ. ಆದರೆ ಮೇಲಿನವರ ಒತ್ತಡದಿಂದಾಗಿ ಕೇಸು ದಾಖಲಿಸುತ್ತಿಲ್ಲ. ಹೀಗಾದರೆ ಜನತೆ ಪೊಲೀಸರ ಮೇಲಿನ ವಿಶ್ವಾಸ ಕಳಕೊಳ್ಳುವ ಪರಿಸ್ಥಿತಿ ಉದ್ಭವಿಸುತ್ತದೆ ಎಂದರು. ಇದಕ್ಕೆ ಸಮಜಾಯಿಸಿ ನೀಡಿದ ಎಸಿಪಿ ಪ್ರತಾಪ್ ಸಿಂಗ್ ಥೋರಟ್, ಇದರಲ್ಲಿ ಯಾರ ಒತ್ತಡವೂ ಇಲ್ಲ, ಎಲ್ಲವೂ ಕಾನೂನು ರೀತಿಯಲ್ಲಿ ನಡೆಯುತ್ತದೆ. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.