ಪರಿಷತ್ ಪ್ರವೇಶಿಸಿದ ಬಿಜೆಪಿಯ ಯುವ ನಾಯಕ

rrrrrrrrrr
Published on




ಮಂಗಳೂರು : ಕಿಶೋರ್ ಕುಮಾರ್ ಅವರು ದಕ್ಷಿಣ ಕನ್ನಡ ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ಪರಿಷತ್‌ಗೆ ಚುನಾಯಿತರಾದ ಬಿಜೆಪಿಯ ಮೂರನೇ ಅಭ್ಯರ್ಥಿಯಾಗಿದ್ದಾರೆ. ದ.ಕ.ಹಾಗೂ ಉಡುಪಿ ಜಿಲ್ಲೆ ವ್ಯಾಪ್ತಿಯ ಈ ದ್ವಿ ಸದಸ್ಯ ಕ್ಷೇತ್ರದಲ್ಲಿ 1998ರ ಚುನಾವಣೆಯಲ್ಲಿ ಬಿಜೆಪಿಯಿಂದ ಅಣ್ಣಾ ವಿನಯಚಂದ್ರ ಗೆಲುವು ಸಾಧಿಸಿದ್ದರು. 2008ರ ಉಪ ಚುನಾವಣೆಯಲ್ಲಿ ಗೆದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಬಳಿಕ ಸತತ ಮೂರು ಬಾರಿ ಜಯ ಸಾಧಿಸಿದ್ದರು.
ಕೃಷಿಕ ಕುಟುಂಬ :
ಕಿಶೋರ್ ಕುಮಾರ್ ಕೃಷಿಕ ಕುಟುಂಬದ ಹಿನ್ನೆಲೆಯವರು. ಜನಸಂಘದ ನೇತಾರ ಬೊಟ್ಯಾಡಿ ದಿ. ರಾಮಣ್ಣ ಭಂಡಾರಿ - ಸುಶೀಲ ಭಂಡಾರಿ ದಂಪತಿಯ ಇಬ್ಬರು ಪುತ್ರರಲ್ಲಿ ಕಿರಿಯವರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ವೆ ಕಲ್ಪನೆಯಲ್ಲಿ ಪ್ರಾಥಮಿಕ ಶಿಕ್ಷಣ, ಎಸ್‌ಜಿಎಂ ಭಕ್ತಕೋಡಿ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಎ. ಪದವಿ ಪೂರೈಸಿದ್ದಾರೆ. ಪತ್ನಿ ಪ್ರೀತಿ ಹಾಗೂ ಪುತ್ರಿ ಆರಾಧ್ಯ ಜತೆಗೆ ಮಂಗಳೂರಿನ ಕದ್ರಿ ಕಂಬಳದ ನಿವಾಸಿಯಾಗಿದ್ದರು.
ಕಬಡ್ಡಿ ಆಟಗಾರ
ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಪುತ್ತೂರು ತಾಲೂಕಿನ ಪ್ರಮುಖರಾಗಿದ್ದ ಕಿಶೋರ್ ಉತ್ತಮ ಕಬಡ್ಡಿ ಆಟಗಾರ .ಮಂಗಳೂರು ವಿ.ವಿ.ತಂಡವನ್ನು ಪ್ರತಿನಿಧಿಸಿದ್ದರು. ಶಿಕ್ಷಣ ಪೂರೈಸಿದ ಬಳಿಕ ಬಿಜೆಪಿ ಸಕ್ರಿಯ ಕಾರ್ಯಕರ್ತರಾದರು. ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆ ಜವಾಬ್ದಾರಿಯನ್ನು ನಿರ್ವಹಿಸಿದವರು. ಮೆಸ್ಕಾಂ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ
ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರಾಗಿದ್ದ ಅವರು ಬಜರಂಗದಳ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು. 2011 ರಲ್ಲಿ ಕಾಶ್ಮೀರದ ಲಾಲ್‌ಚೌಕದಲ್ಲಿ ತಿರಂಗ ಹಾರಿಸಿದ ಯುವಮೋರ್ಚಾ ತಂಡದಲ್ಲಿದ್ದರು. ದೆಹಲಿಯಲ್ಲಿ ಸಂಸತ್ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂಧನಕ್ಕೊಳಗಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net