

ಮಂಡ್ಯ: ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕರ ಸ್ಮರಣಾರ್ಥಕವಾಗಿ ಸ್ಮಾರಕವನ್ನು ನಿರ್ಮಿಸುವ ಉದ್ದೇಶದಿಂದ ಮಣ್ಣು ಸಂಗ್ರಹಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಹೇಳಿದರು.
ನನ್ನ ಮಣ್ಣು ನನ್ನ ದೇಶ ಆಜಾದಿ ಕಾ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಜಿಲ್ಲಾದ್ಯಂತ ಸಂಗ್ರಹಿಸಿದ ಮೃತ್ತಿಕೆ (ಮಣ್ಣು)ಯನ್ನು ತೆಗೆದುಕೊಂಡು ದೆಹಲಿಗೆ ಹೊರಟ ಹೊತ್ತೊಯ್ದ ಬಿಜೆಪಿ ಕಾರ್ಯಕರ್ತರಿಗೆ ನಗರದ ಬಿಜೆಪಿ ವಿಕಾಸ ಭವನದಲ್ಲಿ ಶನಿವಾರ ಬೀಳ್ಕೊಟ್ಟು ಮಾತನಾಡಿದರು.
ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಿ ಹುತಾತ್ಮರಾದ ವೀರ ಸೈನಿಕರಿಗೆ ಗೌರವ ಸಲ್ಲಿಸಲು ದೆಹಲಿಯಲ್ಲಿ ’ಅಮೃತವಾಟಿಕ ’ ಸ್ಮಾರಕ ನಿರ್ಮಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಿಂದ ಮಣ್ಣನ್ನು ಕ್ರೂಢೀಕರಿಸಿ ಅಮೃತ ಕಳಶಗಳ ಮೂಲಕ ದೆಹಲಿಗೆ ರವಾನಿಸಲಾಗುತ್ತಿದೆ. ಇದು ದೇಶದ ಘನತೆಯ ಪ್ರತೀಕವಾಗಿದ್ದು, ಸೈನಿಕರಿಗೆ ಸಲ್ಲಿಸುವ ಗೌರವ ನಮನವಾಗಿದೆ ಎಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ಸಹ ಇಂದಿಗೂ ತಾರತಮ್ಯದ ಅಂಧಕಾರದಲ್ಲಿ ಮುಳುಗಿ ಮಾನವ ಸಮಾಜ ನಲುಗಿ ಹೋಗಿರುವುದು ದುರಂತದ ಸಂಗತಿಯಾಗಿದೆ. ಅದಕ್ಕಾಗಿ ನಾವೆಲ್ಲರೂ ಭಾರತೀಯರು ಎಂಬ ಪರಿಕಲ್ಪನೆಯ ಜಾಗೃತಿಯನ್ನು ಮೂಡಿಸಲು ವಸುದೈವ ಕುಟುಂಬಕಂ ಎಂಬ ಸಮಾನತೆಯ ಸಂದೇಶವನ್ನು ಸಾರಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹರ್ ಘರ್ ತಿರಂಗ, ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ’ನನ್ನ ಮಣ್ಣು ನನ್ನ ದೇಶ ’ಕಾರ್ಯಕ್ರಮ ಪ್ರತೀಕವಾಗಿವೆ. ದೇಶದ 766 ಜಿಲ್ಲೆಗಳ 7000ಕ್ಕೂ ಹೆಚ್ಚು ಬ್ಲಾಕ್‌ಗಳೊಂದಿಗೆ ಅತಿ ಹೆಚ್ಚು ಜನರ ಸಂಗಮಕ್ಕೆ ಸಾಕ್ಷಿಯಾಗಲಿದೆ. ಅಂತಿಮ ಕಾರ್ಯಕ್ರಮಕ್ಕಾಗಿ 8500ಕ್ಕೂ ಹೆಚ್ಚು ಕಳಶ ಅ.31 ರಂದು ದೆಹಲಿಯನ್ನು ತಲುಪಲಿವೆ. ಅಂದೇ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮಾತನಾಡಲಿದ್ದಾರೆ ಎಂದು ವಿವರಿಸಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಚಂದ್ರು, ಡಾ.ಸದಾನಂದ, ಆನಂದ್, ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ.ನಾ. ಸುರೇಶ್, ವಕ್ತಾರ ಸಿ.ಟಿ.ಮಂಜುನಾಥ್ ಇತರರಿದ್ದರು.
ಇದೇ ವೇಳೆ ಮಣ್ಣಿನ ಕಳಶಗಳನ್ನು ಹೊತ್ತ ನಂದೀಶ್, ಯೋಗೇಶ್, ಮಂಜು, ರಾಮಲಿಂಗಂ, ರಾಘವೇಂದ್ರ, ರವಿ, ಮುತ್ತುರಾಜು, ಮೋಹನ, ಸಿ.ಎನ್.ಪ್ರಕಾಶ್, ನಿಂಗರಾಜು, ತೊಳಲಿ ಕೃಷ್ಣಮೂರ್ತಿ ರೈಲಿನಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು.