

ಮಂಡ್ಯ: ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ರೂಪಿಸಿ ಇಲ್ಲಸಲ್ಲದ ಗೊಂದಲ ಸೃಷ್ಠಿಸಲು ಯತ್ನಿಸಿದ್ದವರನ್ನು ಬಂಧಿಸದೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಆದ್ದರಿಂದ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಎನ್‌ಐಎಗೆ ದೂರು ಸಲ್ಲಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಡಿಸಿ ಡಾ.ಕುಮಾರ ಅವರ ಮೂಲಕ ರಾಷ್ಟ್ರೀಯ ತನಿಖಾ ಏಜೆನ್ಸಿಗೆ ದೂರು ಸಲ್ಲಿಸಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಡಾ. ವೀರೇಂದ್ರ ಹೆಗ್ಗಡೆ ಅವರು ಜನರ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಿಂದು ಧರ್ಮದ ವಿರುದ್ಧ ಇಲ್ಲಸಲ್ಲದ ಷಡ್ಯಂತ್ರ ನಡೆಸುತ್ತಿವೆ. ಇದರಿಂದಾಗಿ ಧರ್ಮಸ್ಥಳಕ್ಕೆ ಕಪ್ಪು ಚುಕ್ಕಿ ಹಚ್ಚುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವುದಾಗಿ ಬಡಾಯಿಕೊಚ್ಚಿಕೊಂಡಿದ್ದ ಮಾಸ್ಕ್‌ಮ್ಯಾನ್ ಮುಸುಕು ಹಾಕಿಕೊಂಡು ಆತ ಹೇಳಿದ ಕಡೆಯಲ್ಲೆಲ್ಲ ನೆಲ ಅಗೆದರೂ ಒಂದೇ ಒಂದು ಶವದ ಗುರುತು ಸಿಗಲಿಲ್ಲ. ರಾಜ್ಯ ಸರ್ಕಾರ ಮುಸುಕುಧಾರಿ ಮಾತು ನಂಬಿ ಎಸ್‌ಐಟಿ ತನಿಖೆ ಹೆಸರಲ್ಲಿ ಸಿಕ್ಕ ಸಿಕ್ಕ ಕಡೆ ಜೆಸಿಬಿ ಮೂಲಕ ಹಳ್ಳತೋಡಿ ತೆರಿಗೆದಾರರಹಣ ಪೋಲು ಮಾಡಿದೆ. ಮಾತ್ರವಲ್ಲದೆ ಆತ ಬುರುಡೆ ಹೊರ ತೆಗಯುವಾಗ ಜತೆಗೆ ಯಾರಿದ್ದರು, ಪ್ರೇರಣೆ ನೀಡಿದ್ದು ಯಾರು?. ನೂರಾರು ಸ್ಥಳದಲ್ಲಿ ಶವ ಹೂತಿರುವಾಗ ನಿರ್ದಿಷ್ಟ ಅದೇ ಜಾಗದ ಬುರುಡೆ ತಂದಿದ್ದು ಏಕೆ?. ಆ ಬುರುಡೆಯ ಅಸ್ಥಿ ಪಂಜರ ಯಾರದು?. ಯಾವ ಜಾಗದಲ್ಲಿ ಹಾಗೂ ಇಸವಿಯಲ್ಲಿ ಶವ ಹೂತು ಹಾಕಲಾಗಿತ್ತು?. ಆ ಶವ ಪುರುಷನದ್ದೋ? ಮಹಿಳೆಯದ್ದೋ? ಅಸ್ಥಿ ಪಂಜರ ಹೊರತೆಗೆಯುವ ವೇಳೆ ಜತೆಗೆ ಯಾರಿದ್ದರು? ಏಕಾಏಕಿ ಮಣ್ಣಿನಿಂದ ಹೊರತೆಗೆಯುವ ಬದಲು ಪೊಲೀಸರಿಗೆ ಮಾಹಿತಿ ನೀಡಬಹುದಿತ್ತಲ್ಲ? ಈ ರೀತಿ ಶವ ಹೊರತೆಗೆಯೋದು ಕಾನೂನಾತ್ಮಕವಾಗಿ ಅಪರಾಧ ಎಂದು ಗೊತ್ತಿಲ್ವಾ? ಹೂತ ಶವವನ್ನು ಹೊರತೆಗೆಯಲು ತಾಲೂಕು ದಂಡಾಧಿಕಾರಿ ಅನುಮತಿ ನೀಡಿದ್ದಾರಾ?. ಹೀಗೆ ಹಲವಾರು ಅನುಮಾನಗಳು ಕಾಡುತ್ತಿವೆ. ಈ ಘಟನೆಯ ಹಿಂದೆ ಹಣಕಾಸಿನ ನೆರವಿನ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದು ಧರ್ಮಕ್ಕೆ ಮಸಿ ಬಳಿಯುವ, ಹಾಗು ಹಿಂದೂ ಧಾರ್ಮಿಕ ಕೇಂದ್ರಗಳನ್ನು ಟಾರ್ಗೆಟ್ ಮಾಡಿ ಆ ಕೇಂದ್ರಗಳ ಬಗ್ಗೆ ಅಪನಂಬಿಕೆ ಹುಟ್ಟಿಸುವ ಕೆಲಸವಾಗಿದೆ ಎಂದು ಆರೋಪಿಸಿದರು.
ಈ ಪ್ರಕರಣದ ಷಡ್ಯಂತ್ರ ರೂಪಿಸಿರುವವರಲ್ಲಿ ಹಲವರು ಇದ್ದಾರೆ. ಅವರಿಗೆ ಯಾರು ಹಣ ಕೊಡುತ್ತಿದ್ದರು, ವಿದೇಶಗಳಿಂದಲೂ ಹಣ ಹರಿದುಬಂದಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಇದನ್ನು ಎನ್‌ಐಎಗೆ ವಹಿಸಿ ತನಿಖೆ ನಡೆಸುವಂತೆ ಆಗ್ರಹಿಸಿದರು.
ಮುಖಂಡರಾದ ಶಿವಕುಮಾರ್ ಆರಾಧ್ಯ, ಹೊಸಹಳ್ಳಿ ಶಿವು, ಚಂದ್ರು, ನಂದೀಶ, ಪ್ರಸನ್ನ ಇದ್ದರು.