

ಮಂಡ್ಯ: ಜಿಲ್ಲೆಯ ಸರ್ಕಾರಿ ಗೋಮಾಳ, ಗುಂಪುತೋಪು, ಶಾಲೆ, ನದಿ ಪಾತ್ರದ ಖಾಲಿ ಜಾಗ, ದೇವಾಲಯ, ರೈತರಿಗೆ ಸೇರಿದ ವಿವಿಧ ಸರ್ವೆ ನಂಬರ್‌ಗಳ ಜಮೀನುಗಳನ್ನು ವಕ್ಪ್ ಬೋರ್ಡ್ ಆಸ್ತಿ ಎಂದು ಘೋಷಿಸುತ್ತಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರ ಮೂಲಕ ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರಿಗೆ ಮನವಿ ಸಲ್ಲಿಸಿ ರಾಜ್ಯ ಸರ್ಕಾರ ಹಾಗೂ ರೈತರ ಜಮೀನು ವಕ್ಪ್ ಬೋರ್ಡ್‌ನಿಂದ ಕಾಪಾಡುವಂತೆ ಒತ್ತಾಯಿಸಿದರು. ವಕ್ಫೃ್ ಬೋರ್ಡ್ ಅವಾಂತರದಿಂದ ಗೋಮಾಳ, ಸ್ಮಶಾನ, ಪಿತ್ರಾರ್ಜಿತ ಆಸ್ತಿ ಪಹಣಿ ಬದಲಾವಣೆ ಆಗಿದೆ. ಪಹಣಿ ರಾತ್ರೋರಾತ್ರಿ ಬದಲಾವಣೆ ಆಗುತ್ತಿದೆ. ರೈತಾಪಿ ವರ್ಗ ಆತಂಕದಲ್ಲಿದೆ. ಜಮೀನೇ ಇಲ್ಲ ಅಂದರೆ ಏನು ಮಾಡಬೇಕು?. ವಕ್ಫೃ್ ಆಸ್ತಿ ಅತಿಕ್ರಮಣ ಆಗಿದೆ ಎಂದು ಜನರು ಸರ್ಕಾರಿ ಕಚೇರಿ ಮುಂದೆ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರೈತ ಹೋರಾಟಗಾರ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಜನ್ಮಭೂಮಿ ಕ್ಯಾತನಹಳ್ಳಿಯ ಸರ್ಕಾರಿ ಶಾಲೆ, ಕೆ.ಆರ್.ಪೇಟೆ ತಾಲೂಕು ಬೂಕನಕೆರೆಯ ಬಿಸಿಎಂ ಹಾಸ್ಟೆಲ್, ನಾಗಮಂಗಲ ಪಟ್ಟಣದ ಪುರಾತನ ದೇವಾಲಯ, ದೇವಲಾಪುರ ಭೀಮನಹಳ್ಳಿಯ ದೇವಾಲಯ, ಶ್ರೀರಂಗಪಟ್ಟಣದ ಕೋಟೆ, ಕಂದಕದ ಜಾಗ ಹಾಗೂ ಸಂತೆ ಮೈದಾನ, ಕೆ.ಆರ್.ಪೇಟೆ ಹೊಸಹೊಳಲು ಸಿಂಗಮ್ಮ ದೇವಾಲಯ ಸೇರಿದಂತೆ ನೂರಾರು ಸರ್ಕಾರಿ ಆಸ್ತಿಗಳನ್ನು ವಕ್ಫೃ್ ಕಬಳಿಸಿದೆ. ಆದ್ದರಿಂದ ದೇಶಕ್ಕೆ ಮಾರಕವಾಗಿರುವ ವಕ್ಫ್ ಬೋರ್ಡ್ ಕಾನೂನನ್ನು ಕೂಡಲೇ ರದ್ದು ಮಾಡಬೇಕು. ಬೋರ್ಡ್ ಕಬಳಿಸಿರುವ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಪ್ರಸನ್ನ, ಚಂದ್ರು, ಜವರೇಗೌಡ, ಸಾಗರ್, ಶಿವಲಿಂಗು, ಅನಿಲ್, ಶಿವಕುಮಾರ್, ವಿನೋಭ ಇತರರಿದ್ದರು.