

ಯಳಂದೂರು: ಜಿಲ್ಲೆಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಬೂತ್‌ಗಳಲ್ಲಿ ಮತಪಟ್ಟಿ ಪರಿಷ್ಕರಣೆಯನ್ನು ಮಾಡುವ ಕೆಲಸವನ್ನು ಮಾಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಭಾರತೀಯ ಜನತಾ ಪಾರ್ಟಿ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರಿಗೆ ಜಿ.ಎಸ್.ಟಿ. ಕಾರ್ಯಾಗಾರ ಹಾಗೂ ಬಿಎಲ್‌ಎ-2 ಕುರಿತು ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರಗಳ ಪ್ರತಿಯೊಂದು ಬೂತ್‌ಗಳಲ್ಲಿ ಬಿಎಲ್‌ಎಗಳು ಪರಿಷ್ಕರಣೆಗಾಗಿ ಹೋದಾಗ ಬಿಜೆಪಿ ಕಾರ್ಯಕರ್ತರು ಜತೆಯಲ್ಲಿದ್ದುಕೊಂಡು ಸಹಕಾರ ನೀಡಬೇಕು. ಮೃತರಾದವರು, ಗ್ರಾಮ, ಪಟ್ಟಣ ಬಿಟ್ಟು ಹೋಗಿರುವವರನ್ನು ಗುರುತಿಸಬೇಕು ಮತ್ತು ಎರಡು ಕಡೆಗಳಲ್ಲಿ ಬರುವ ಹೆಸರನ್ನು ತೆಗೆದು ಹಾಕುವ ಕೆಲಸ ಮಾಡಬೇಕು. ಜತೆಗೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಅರ್ಹ ಮತದಾರರು ಮಾತ್ರ ಮತದಾನ ಮಾಡುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಬೂತ್ ಏಜೆಂಟರದ್ದಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸಮಪರ್ಕವಾಗಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಆರ್ಥಿಕ ತಜ್ಞ ವಿಶ್ವನಾಥ ಭಟ್ ಮಾತನಾಡಿ, ಕೇಂದ್ರ ಸರ್ಕಾರ ಕೆಲ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ದರ ಇಳಿಕೆ ಮಾಡಿದ್ದರಿಂದ ಬಡ, ವಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ. ಇದರಿಂದ ದೈನಂದಿನ ಆಹಾರ ಪದಾರ್ಥಗಳು, ನಿರ್ಮಾಣ ಸಾಮಗ್ರಿಗಳು, ಜಿಮ್‌ಗಳು/ಫಿಟ್‌ನೆಸ್ ಕೇಂದ್ರಗಳು ಮತ್ತು ಕಾರು, ಬೈಕ್ ಆಟೋಮೊಬೈಲ್‌ಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಇತರ ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡುವ ಮೂಲಕ ಸರ್ಕಾರ ಮಧ್ಯಮ ವರ್ಗದ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದಲ್ಲದೆ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಿದೆ ಎಂದು ತಿಳಿಸಿದರು.
ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಎಸ್.ಬಾಲರಾಜು, ಯಳಂದೂರು ಬಿಜೆಪಿ ಮಂಡಲದ ಅಧ್ಯಕ್ಷ ಅನಿಲ್, ಪ್ರಧಾನ ಕಾರ್ಯದರ್ಶಿ ಕೆಂಪರಾಜು, ಕೆ.ಎನ್.ನಾಗೇಶ್, ಲೋಕೇಶ್, ಟಗರಪುರ ರೇವಣ್ಣ, ರವಿ, ರಾಜುನಾಯಕ್, ಮಹೇಶ್, ಗಣಿಗನೂರು ಲೋಕೇಶ್, ಮಾಂಬಳ್ಳಿ ರಾಮು, ನಾಗರಾಜು ಇತರರು ಇದ್ದರು.
.