ಜೀವ ವಿರೋಧಿಗಳಿಗೆ ಕಠಿಣ ಕ್ರಮವಾಗಲಿ: ಬಿಜೆಪಿ ಕಾರ್ಯಕರ್ತರು ದೂರು ಸಲ್ಲಿಕೆ

BJP workers protest Mandya
Published on

ಮಂಡ್ಯ: ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ದೂರು ನೀಡಿದರು.

ನಗರದ ಜಿಲ್ಲಾ ಪೊಲೀಸ್ ಇಲಾಖೆ ಬಳಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿರುವ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವವರ ವಿರುದ್ಧ ಧಿಕ್ಕಾರ ಕೂಗಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಖೇನ, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಮುಖಂಡ ಶಿವಕುಮಾರ್ ಆರಾಧ್ಯ ಮಾತನಾಡಿ, ತಾಯಿಯ ಎದೆಹಾಲು ಬಿಟ್ಟರೆ ಮನುಷ್ಯ ಕುಡಿದು ಬದುಕುವುದು ಸಾಕುಪ್ರಾಣಿಗಳಾದ ಹಸುವಿನ ಹಾಲು. ಹಸುವಿಗೆ 2ನೇ ತಾಯಿಸ್ಥಾನ ನೀಡಲಾಗಿದೆ. ಇಂತಹ ಹಸುಗಳ ಕೆಚ್ಚಲನ್ನು ಕತ್ತರಿಸಿ, ನೋವುಂಟು ಮಾಡಿ, ಹಿಂದುಗಳ ಆರಾಧ್ಯ ದೈವ್ಯರೂಪಿಯನ್ನು ಕುರೂಪಿ ಮಾಡಿರುವವರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.

ಹಸುಗಳು ಹಿಂದುಗಳಿಗೆ ಅತ್ಯಂತ ಪೂಜ್ಯ ಪ್ರಾಣಿ. ಅದು ಬರೀ ಪ್ರಾಣಿ ಅಲ್ಲ, ಬದಲಿಗೆ ನಮಗೆ ಅನ್ನ ಹಾಕುತ್ತದೆ. ಗೊಬ್ಬರ ಮತ್ತು ಔಷಧ ಕೊಡುತ್ತದೆ. ರೈತರ ಬೆನ್ನೆಲುಬು. ಆದರೆ ಕೆಲ ಜಿಹಾದಿಗಳು ಮಾತೃಸ್ಥಾನದಲ್ಲಿರುವ ಹಸುಗಳ ಕೆಚ್ಚಲನ್ನು ಕೊಯ್ದು ವಿಕೃತಿ ಮೆರೆದಿರುವ ಬಗ್ಗೆ ನೋಡಿದರೆ ನಾವು ಪಾಕಿಸ್ತಾನದಲ್ಲೋ ಅಥವಾ ಬಾಂಗ್ಲಾ ದೇಶದಲ್ಲಿದ್ದೇವೆ ಎನ್ನುವ ಅನುಮಾನ ಮೂಡುತ್ತಿದೆ. ಇದು ದೇಶದ ಅಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ. ಹಾಗಾಗಿ ಇಂತಹವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇವೆ ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಚಂದ್ರ, ಪ್ರಸನ್ನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net