

ಮಂಡ್ಯ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿದ್ದ ಪ್ರಾಷಿಕ್ಯೂಷನ್ ಆದೇಶವನ್ನು ಹೈಕೋರ್ಟ್ ಪುರಸ್ಕರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ರಾಜೀನಾಮೆಗೆ ಒತ್ತಾಯಿಸಿದರು. ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಅಂದೇ ರಾಜೀನಾಮೆ ನೀಡಬೇಕಿತ್ತು. ಆದರೆ ಬಂಡರಂತೆ ವರ್ತಿಸುವುದರ ಜತೆಗೆ ಕಾನೂನಿಗೆ ಬೆಲೆ ಕೊಡದೇ ಸಂವಿಧಾನ ವಿರೋಧಿ ನಡೆ ಅನುಸರಿಸಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ. ಇನ್ನಾದರೂ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷವು ಸಂವಿಧಾನಕ್ಕೆ ಗೌರವ ಕೊಡುತ್ತದೆ ಎನ್ನುತ್ತಾರೆ. ಆದರೆ ರಾಜ್ಯಪಾಲರ ವಿರುದ್ಧವೇ ಅಪಮಾನ ಮಾಡುವಂತೆ ಕಾಂಗ್ರೆಸ್ ಮುಖಂಡರ ಹೇಳಿಕೆ ಖಂಡನೀಯ. ಮೊದಲು ರಾಜ್ಯಪಾಲರ ಸ್ಥಾನಕ್ಕೆ ಗೌರವ ನೀಡಿ, ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಮುಖ್ಯಮಂತ್ರಿ ಅವರ ಮೇಲ್ಮನವಿ ಅರ್ಜಿ ವಜಾ ಮಾಡಿ ಹೈಕೋರ್ಟ್ ನೀಡಿರುವ ತೀರ್ಪು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯವಾಗಿದೆ. ಸಿದ್ದರಾಮಯ್ಯ ಅವರ ತನಿಖೆಗೆ ಆದೇಶ ನೀಡಿದ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದೆ. ಇದು ಸ್ವಾಗತಾರ್ಹ. 40 ವರ್ಷದಿಂದ ಕಪ್ಪುಚುಕ್ಕೆ ಇಲ್ಲ ಎಂದಿದ್ದ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ಇರುವ ಗೌರವ ಉಳಿಸಿಕೊಳ್ಳಬೇಕು. ಇಲ್ಲವಾದರೆ ರಾಜೀನಾಮೆ ನೀಡುವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ವಿದೇಶದಿಂದ ನೆಲದಲ್ಲಿ ನಿಂತು ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕೂಗಿ ಕೂಗಿ ಹೇಳುತ್ತಿರುವ ರಾಹುಲ್ ಗಾಂಧಿ ಅವರು, ಸಿದ್ದರಾಮಯ್ಯನವರ ರಾಜೀನಾಮೆ ಪಡೆಯುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಹತಾಶರಾದ ಜನರಿಂದ ಐವಾನ್ ಡಿಸೋಜಾ ಹೇಳಿದ ಮಾದರಿಯಲ್ಲಿ ಗಲಭೆ ಎಬ್ಬಿಸುವ ಸಂಭವವಿದ್ದು, ಕೂಡಲೇ ಗೃಹ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ ಮಾತನಾಡಿ, ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದಾಗ ಸಂವಿಧಾನ ಇದೇ ಇತ್ತು ಎಂಬುದನ್ನು ಸಿದ್ದರಾಮಯ್ಯ ಅವರು ಅರ್ಥ ಮಾಡಿಕೊಂಡು ರಾಜೀನಾಮೆ ನೀಡಬೇಕು. ಇದರಲ್ಲಿ ಯಾರ ಪಿತೂರಿಯೂ ಇಲ್ಲ, ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ಮೈಸೂರಿನ ಮುಡಾ ಹಗರಣದಲ್ಲಿ ಇವರು ಭಾಗಿಯಾಗಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಹೈಕೋರ್ಟ್ ಸಮಂಜಸವಾಗಿ ಇವರ ಅರ್ಜಿ ರದ್ದು ಮಾಡಿ, ರಾಜ್ಯಪಾಲರ ಆದೇಶವನ್ನೇ ಎತ್ತಿ ಹಿಡಿದಿದೆ, ಹಾಗಾಗಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಇಂದ್ರೇಶ್, ಡಾ.ಸದಾನಂದ, ಆನಂದ್, ವಿವೇಕ್, ಪೀಹಳ್ಳಿ ರಮೇಶ್, ಜವರೇಗೌಡ, ನಾಗಾನಂದ, ನಂದೀಶ್, ನಿತ್ಯಾನಂದ, ಶಂಕರ್, ಚಾಮರಾಜು, ಕೃಷ್ಣ, ಶಿವಲಿಂಗು, ಡಣಾಯನಕಪುರ ರವಿ, ಸಂತೋಷ್ ಭಾಗವಹಿಸಿದ್ದರು.