

ಮಂಡ್ಯ: ಮೈಷುಗರ್ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ತುರ್ತಾಗಿ ಕಟಾವು ಮಾಡಿಸಿ ನುರಿಸಬೇಕು. ಇಲ್ಲದಿದ್ದರೆ ಬೇರೆ ಕಾರ್ಖಾನೆಗೆ ಪೂರೈಕೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ಹಾಗೂ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೇವಿನಸೊಪ್ಪು ತಿನ್ನುವ ಮೂಲಕ ಪ್ರತಿಭಟಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಕಬ್ಬಿನ ಜೊಲ್ಲೆ ಮತ್ತು ಬೇವಿನ ಸೊಪ್ಪು ಹಿಡಿದು ಪ್ರತಿಭಟಿಸಿದ ರೈತರು ಮತ್ತು ಕಾರ್ಯಕರ್ತರು, ಮೈಷುಗರ್ ವ್ಯಾಪ್ತಿಯ ಕಬ್ಬನ್ನು ನಿಗದಿತ ಸಮಯದೊಳಗೆ ಕಟಾವು ಮಾಡಿಸದೆ ಜಿಲ್ಲಾಡಳಿತ ಸಿಹಿ ಬೆಳೆದ ರೈತರಿಗೆ ಕಹಿ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಷುಗರ್ ಕಾರ್ಖಾನೆಗೆ ಒಪ್ಪಿಗೆಯಾಗಿರುವ ಕಬ್ಬನ್ನು ವರ್ಷದೊಳಗೆ ಕಟಾವು ಮಾಡಿಸದೆ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಇದರಿಂದ ಜಮೀನಿನಲ್ಲಿರುವ ಕಬ್ಬಿಗೆ ಈಗಾಗಲೇ 14 ರಿಂದ 15 ತಿಂಗಳು ಆಗಿದೆ. ಬೆಳೆ ಕಟಾವು ಮಾಡದ ಹಿನ್ನೆಲೆಯಲ್ಲಿ ಸಾಲ ಮರು ಪಾವತಿಸಲು ಸಾಧ್ಯವಾಗಿಲ್ಲ. ಪರಿಣಾಮ ರೈತರಿಗೆ ಬ್ಯಾಂಕಿನಿಂದ ಆಭರಣ ಹರಾಜು ನೋಟಿಸ್ ಮತ್ತು ಬೆಳೆ ಸಾಲ ಪಾವತಿಗೆ ನ್ಯಾಯಾಲಯದಿಂದ ನೋಟಿಸ್ ಜಾರಿ ಮಾಡಿಸಲಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿ ಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮೈಷುಗರ್ ಕಾರ್ಖಾನೆ ಎರಡು ಮೂರು ದಿನದೊಳಗೆ ಕಬ್ಬು ಕಟಾವು ಮಾಡಿಸಬೇಕು. ಇಲ್ಲದಿದ್ದರೆ ಬೇರೆ ಕಾರ್ಖಾನೆಗಳಿಗೆ ಸರಬರಾಜು ಮಾಡಲು ಅವಕಾಶ ಮಾಡಿಕೊಡಬೇಕು. ಕಬ್ಬು ಸರಬರಾಜು ಮಾಡಲು ಅವಕಾಶ ವಾಗದೆ ಸಂಕಷ್ಟಕ್ಕೆ ಸಿಲುಕುವ ರೈತ ಆತ್ಮಹತ್ಯೆ ಮಾಡಿಕೊಂಡರೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನೇರ ಹೊಣೆಯಾಗಲಿದೆ. ಜತೆಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಸ್.ಶಿವಕುಮಾರ್ ಆರಾಧ್ಯ, ವಿವೇಕ್, ಪ್ರಸನ್ನಕುಮಾರ, ಹೊಸಹಳ್ಳಿ ಶಿವು, ಎಚ್.ಕೆ.ಮಂಜುನಾಥ್, ಎಸ್.ಸಿ. ಯೋಗೇಶ್ ಇದ್ದರು.