

ಮಂಡ್ಯ: ಇಂದಿರಾಗಾಂಧಿ ಪ್ರಧಾನ ಮಂತ್ರಿಯಾಗಿದ್ದ ವೇಳೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ದಿನವನ್ನು ಖಂಡಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದರು.
ಜಿಲ್ಲಾ ಬಿಜೆಪಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಮತ್ತು ಮುಖಂಡರು, ಹೆದ್ದಾರಿಯಲ್ಲಿ ಘೋಷಣೆ ಕೂಗುತ್ತಾ ಕಾಂಗ್ರೆಸ್ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ಇಂದಿರಾ ಗಾಂಧಿ ಘೋಷಣೆ ಮಾಡಿದ ತುರ್ತು ಪರಿಸ್ಥಿತಿ ಸಂಬಂಧ ಫಲಕಗಳನ್ನಿಡಿದು ಸಾಗಿದರು.
ಇತ್ತ ಮುನ್ನೆಚ್ಚರಿಕೆ ಕ್ರಮವಾಗಿ ಕಾಂಗ್ರೆಸ್ ಕಚೇರಿ ಕೂಗಳತೆಯ ದೂರದಲ್ಲಿ ಪೊಲೀಸರು ಬ್ಯಾರಿಕೇಡ್ ಸರ್ಪಗಾವಲು ಹಾಕಿಕೊಂಡು ನಿಂತಿದ್ದರು. ಇದನ್ನು ಲೆಕ್ಕಿಸದೇ ಬಿಜೆಪಿ ಕಾರ್ಯಕರ್ತರು ನುಗ್ಗಲು ಯತ್ನಿಸಿದಾಗ ಅವರನ್ನು ಸ್ಥಳದಲ್ಲಿಯೇ ಬಂಧಿಸಿ ಪೊಲೀಸ್ ಕವಾಯತು ಮೈದಾನಕ್ಕೆ ಎಳೆದೊಯ್ದರು. ನಂತರ ಬಿಡುಗಡೆ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ಪ್ರತಿಭಟನಾಕಾರರು, ಸಂವಿಧಾನದ ಬಗ್ಗೆ ಮಾತನಾಡಲು ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇಲ್ಲ. ಏಕೆಂದರೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರ ನಡೆ ಅತ್ಯಂತ ಖಂಡನೀಯ ಹಾಗೂ ಸಂವಿಧಾನ ವಿರೋಧಿಯಾಗಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷವು ಕ್ಷಮೆ ಕೇಳಬೇಕು. ಜತೆಗೆ ವರಿಷ್ಠ ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದ ಸಿದ್ದರಾಮಯ್ಯ ಅವರು ಈಗ ಅದೇ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿ ಮೌನಕ್ಕೆ ಶರಣಾಗಿದ್ದಾರೆ. ಸಂವಿಧಾನದ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕತೆ ಎಲ್ಲಿದೆ?. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ ಕಾಂಗ್ರೆಸ್ ನಡೆ ಖಂಡನೀಯ. ಬಿಜೆಪಿ ಪಕ್ಷದವರು ಸಂವಿಧಾನ ಬದಲಿಸುತ್ತಾರೆ ಎಂಬ ಮಾತುಗಳನ್ನು ಕಾಂಗ್ರೆಸ್‌ನವರು ಹೇಳುತ್ತಿದೆ. ಆದರೆ ಬಿಜೆಪಿಗರು ಬದಲಾವಣೆ ಮಾಡಿಲ್ಲ. ಮಾಡದೇ ಇದ್ದರೂ ಆರೋಪ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ದ್ರೋಹ ಎಸಗಿದವರು ಮತ್ತು ಎಸಗುತ್ತಿರುವವರು ಕಾಂಗ್ರೆಸ್ ಪಕ್ಷದವರು ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ನಗರ ಘಟಕದ ಅಧ್ಯಕ್ಷ ವಸಂತ್, ಶಿವಕುಮಾರ್ ಆರಾಧ್ಯ, ಭೀಮೇಶ್, ಶಂಕರ್, ಹೊಸಹಳ್ಳಿ ಶಿವು, ಮಹಾಂತಪ್ಪ, ಶಿವುಲಿಂಗು, ಕ್ರಾಂತಿ ಮಂಜು, ವಿವೇಕ್, ಚಂದ್ರು, ನಿತ್ಯಾನಂದ, ಧರಣಿ, ದೇವೀರಮ್ಮ, ಕೆ.ಆರ್.ಪೇಟೆ ನಾಗಣ್ಣ ಇತರರಿದ್ದರು.