ಪಾಕಿಸ್ತಾನದ ಪ್ರಜೆಗಳನ್ನು ಗಡಿಪಾರು ಮಾಡಿ: ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

BJP workers protest Mandya
Published on

ಮಂಡ್ಯ: ಉದ್ಯೋಗ, ಶಿಕ್ಷಣ, ವ್ಯಾಪಾರ, ಆರೋಗ್ಯ ನೆಪದಲ್ಲಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಪತ್ತೆ ಮಾಡಿ ದೇಶದಿಂದ ಗಡಿಪಾರು ಮಾಡುವಂತೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಜಿಲ್ಲೆಯಲ್ಲಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಕ್ರಮ ವಾಸಿಗಳನ್ನು ಪತ್ತೆ ಹಚ್ಚಿ ಕೂಡಲೇ ಗಡಿಪಾರು ಮಾಡುವಂತೆ ಘೋಷಣೆ ಕೂಗಿದರು.

ದೇಶ ತಲೆ ತಗ್ಗಿಸುವ ರೀತಿ ಪಹಲ್ಗಾಮ್ ಹತ್ಯಾಕಾಂಡ ನಡೆದ ಹಿನ್ನೆಲೆ ಕೇಂದ್ರ ಸರ್ಕಾರ ಪಾಕಿಸ್ತಾನದ ಪ್ರಜೆಗಳ ವೀಸಾ ರದ್ದು ಮಾಡಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ಇರುವ ಎಲ್ಲ ರಾಜ್ಯಗಳಲ್ಲಿ ಪಾಕಿಸ್ತಾನದ ಪ್ರಜೆಗಳನ್ನು ದೇಶದಿಂದ ಹಿಂದಿರುಗಿಸಲು ಕ್ರಮವಹಿಸಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಆ ಕೆಲಸ ಆಗುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಮತ ಬ್ಯಾಂಕ್ ಹಾಗೂ ಅಲ್ಪಸಂಖ್ಯಾತರ ಓಲೈಕೆಯಿಂದಾಗಿ ಅವರ ಮೇಲಿನ ಪ್ರಕರಣಗಳ ಖುಲಾಸೆ ಮಾಡಿ ಬಿಡುಗಡೆಗೊಳಿಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಿದ್ದು, ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಎಲ್ಲಿದ್ದಾರೆ. ಯಾವ ಸಂಘಟನೆಯಲ್ಲಿದ್ದಾರೆ, ಯಾವ ಕೃತ್ಯವೆಸಗುತ್ತಿದ್ದಾರೆ ಇದರ ಬಗ್ಗೆ ಕ್ರಮವಹಿಸಲು ರಾಜ್ಯ ಸರ್ಕಾರ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ವಿವೇಕ್, ಅಶೋಕ್‌ಕುಮಾರ್, ಶಿವಲಿಂಗಯ್ಯ, ಪೀ.ಹಳ್ಳಿ ರಮೇಶ್, ನಿತ್ಯಾನಂದ, ಶಿವಕುಮಾರ್ ಆರಾಧ್ಯ, ಹೇಮಾವತಿ, ಶಿವಲಿಂಗಮ್ಮ, ಬಿ.ಕೃಷ್ಣ, ಮಹಂತಪ್ಪ ಇತರರಿದ್ದರು.

ಸಂಭ್ರಮಾಚರಣೆ: ಪಾಕಿಸ್ತಾನದ ಉಗ್ರರ ನೆಲೆ ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಪರಾಕ್ರಮದ ವಿಜಯೋತ್ಸವವನ್ನು ಆಚರಿಸಿದರು. ಪಾಕಿಸ್ತಾನದಲ್ಲಿ ಉಗ್ರರನ್ನ ದಮನ ಮಾಡಿದ ರೆಫೆಲ್ ಯುದ್ಧ ನೌಕೆ ಮಾದರಿಗೆ ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟಿ ಸಿಂಧೂರ ಇಟ್ಟು ಸಿಹಿ ಹಂಚಿ ಸಂಭ್ರಮಿಸಿದರು.

ಜಮ್ಮು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಅಮಾಯಕರ ಪ್ರಾಣ ತೆಗೆದಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ದೇಶದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net