ಜಾತಿಗಣತಿ ವರದಿ ಜಾರಿಗೆ ತರದಂತೆ ಆಗ್ರಹ: ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

BJP workers protest Mandya
Published on

ಮಂಡ್ಯ: ಕಾಂತರಾಜ ಆಯೋಗ ವರದಿ ಜಾತಿಗಣತಿ ಅವೈಜ್ಞಾನಿಕವಾಗಿದ್ದು, ಅದನ್ನು ಜಾರಿಗೆ ತರಬಾರದು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರಸಭೆ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಾತ್ರವಲ್ಲದೆ ಕಸ ತುಂಬುವ ವಾಹನಕ್ಕೆ ವರದಿಯ ಪ್ರತಿಯನ್ನು ಚೀಲದಲ್ಲಿ ತುಂಬುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಹಿಂದುಳಿದ ಸಮುದಾಯಗಳ ಹಿತ ಕಾಪಾಡುವಲ್ಲಿ ಕಾಂತರಾಜ ಆಯೋಗದ ವರದಿ ವಿಫಲವಾಗಿದೆ. ಹಲವು ಸಮುದಾಯಗಳಿಗೆ ಸಂಬಂಧಿಸಿದಂತೆ ಜಾತಿಗಣತಿ ಸರಿಯಾಗಿ ನಡೆದಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದಿದ್ದರೂ ಅದನ್ನು ಸ್ವಪಕ್ಷೀಯದವರೇ ವಿರೋಧಿಸುತ್ತಿರುವಾಗ ರಾಜ್ಯಸರ್ಕಾರ ಮಾತ್ರ ಅದನ್ನು ಆತುರವಾಗಿ ಬಿಡುಗಡೆ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

ಕಾಂತರಾಜ ಆಯೋಗದ ವರದಿಯು ಆರ್ಥಿಕ ಮತ್ತು ಶೈಕ್ಷಣಿಕವೆಂದು ಹೇಳಿ ಸರ್ಕಾರವು ನಂಬಿಸಲು ಹೋಗುತ್ತಿದೆ. ಇದು ಅಕ್ಷರಶಃ ಹಿಂದು ಸಮುದಾಯವನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಸಮುದಾಯದ ಜನಸಂಖ್ಯೆ ಹೆಚ್ಚು ತೋರಿಸಲು ಮನೆಯಲ್ಲಿಯೇ ಕುಳಿತು ತಯಾರಿಸಿದ ಜಾತಿ ಸಮೀಕ್ಷೆಯಾಗಿದ್ದು, ಇದರಿಂದ ಸರ್ಕಾರದ ಹಣವನ್ನು ಪೋಲು ಮಾಡಲಾಗಿದೆ. ಹಾಗಾಗಿ ಈ ಸಮೀಕ್ಷೆಯನ್ನು ಕಸದಬುಟ್ಟಿಗೆ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದೇವೆ ಎಂದು ಕಿಡಿಕಾರಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮುಖಂಡರಾದ ಪ್ರಸನ್ನ, ಶಿವಲಿಂಗಯ್ಯ, ಯೋಗೇಶ್, ಚಂದ್ರು, ಶಿವಕುಮಾರ ಆರಾಧ್ಯ, ಹೊಸಹಳ್ಳಿ ಸ್ವಾಮಿಗೌಡ, ಮೋಹನ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net