ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

sirsi Bjp
Published on

ಶಿರಸಿ: ಆಶ್ರಯ ಮನೆಗಳಿಗೆ ರಾಜ್ಯ ಸರ್ಕಾರ ಎರಡು ಮತ್ತು ಮೂರನೇ ಬಿಲ್​ಗಳನ್ನು ಮಂಜೂರು ಮಾಡುತ್ತಿಲ್ಲ. ಇದರಿಂದ ಫಲಾನುಭವಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಬಾಕಿ ಇರುವ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ಪ್ರಮುಖ ಆರ್.ಡಿ. ಹೆಗಡೆ ಜಾನ್ಮನೆ ಮಾತನಾಡಿ, ಜನ ಕೇಳದಿದ್ದರೂ ಉಚಿತಗಳ ಆಮಿಷ ಒಡ್ಡಿ, ಮತ ಪಡೆದ ಕಾಂಗ್ರೆಸ್ ಸರ್ಕಾರ ಈಗ ಅಭಿವೃದ್ಧಿ ಕಾರ್ಯ ಮಾಡುವುದನ್ನೇ ಮರೆತಿದೆ. ಇನ್ನು 15 ದಿನದಲ್ಲಿ ಆಶ್ರಯ ಮನೆಗಳ ಇನ್ನುಳಿದ ಬಿಲ್ ಹಣ ಮಂಜೂರು ಮಾಡದಿದ್ದರೆ ಎಸಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ನಿಡಗೋಡ ಮಾತನಾಡಿ, ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷ ಜನರಿಗೆ ಬಿಟ್ಟಿ ಭಾಗ್ಯಗಳ ಆಸೆ ತೋರಿಸಿ ಅಧಿಕಾರಕ್ಕೆ ಬಂದಿದೆ. ಮನೆ ಮಂಜೂರಾತಿ ಪಡೆದವರು ತಮ್ಮ ಹಳೇ ಮನೆಯನ್ನು ಕೆಡವಿ ಅಲ್ಲಿಯೇ ಮನೆ ನಿರ್ವಿುಸಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಮನೆ ಕಂತುಗಳನ್ನು ನೀಡದೇ ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿದೆ. ಕೆಲವರಿಗೆ ಒಂದು ಕಂತು, ಇನ್ನು ಕೆಲವರಿಗೆ ಕೇವಲ 1 ರೂ. ಗಳನ್ನು ಖಾತೆಗೆ ಜಮಾ ಮಾಡಿದೆ. ಫಲಾನುಭವಿಗಳಲ್ಲಿ ಕೆಲವರು ಅನಿವಾರ್ಯವಾಗಿ ಬೇರೆಡೆ ಸಾಲ ಮಾಡಿ ಮನೆ ನಿರ್ವಿುಸಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದರೆ ಇನ್ನು ಕೆಲ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿವೆ. ಹೀಗಾಗಿ ಆಶ್ರಯ ಮನೆಯ ಉಳಿದ ಕಂತುಗಳನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಫಲಾನುಭವಿಗಳು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗೆ ಮನವಿ ನೀಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷೆ ಉಷಾ ಹೆಗಡೆ, ಅನಂತಮೂರ್ತಿ ಹೆಗಡೆ, ಶ್ರೀನಾಥ ಶೆಟ್ಟಿ, ಮಂಜುನಾಥ ಭಂಡಾರಿ, ನರಸಿಂಹ ಹೆಗಡೆ, ನಾಗರಾಜ ಶೆಟ್ಟಿ, ನಿರ್ಮಲಾ ಇಸಳೂರು, ಇತರರಿದ್ದರು.

ಅಳಲು ತೋಡಿಕೊಂಡ ಫಲಾನುಭವಿಗಳು:

ಬಿಲ್ ಮಂಜೂರಾಗದೇ ಅತಂತ್ರವಾಗಿರುವ ಫಲಾನುಭವಿಗಳು ಇದೇ ವೇಳೆ ಉಪವಿಭಾಗಾಧಿಕಾರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು. ಫಲಾನುಭವಿಗಳ ಪರವಾಗಿ ಮಾತನಾಡಿದ ಗೌರಿ ಮಂಜುನಾಥ ನಾಯ್ಕ, ಮನೆ ಮಂಜೂರಾಗಿದೆ ಎಂದು ಇದ್ದ ಮನೆಯನ್ನು ಕೆಡವಿಕೊಂಡು ನಾವೀಗ ಬೀದಿಯಲ್ಲಿ ನಾವು ನಿಂತಿದ್ದೇವೆ. ರಾಜಕಾರಣಿಗಳು ಮತ ಕೇಳಲು ಬಂದಾಗ ಕಾಲಿಗೆ ಬೀಳ್ತಾರೆ, ಆ ಮೇಲೆ ಮರೆತು ಬಿಡುತ್ತಿದ್ದಾರೆ. ಈ ಸರ್ಕಾರ ಅಲ್ಪ ಸಂಖ್ಯಾತರಿಗೆ ವಿವಾಹವಾಗಲು 50 ಸಾವಿರ ರೂ. ಕೊಡುತ್ತಾರೆ. ನಾವು ಹಿಂದುಗಳಿಗೆ ಮಾತ್ರ ಇಂತಹ ಸೌಲಭ್ಯ ಏಕಿಲ್ಲ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net