ಜಿಎಸ್‌ಟಿ ಕಡಿತ ಹಿನ್ನೆಲೆ, ಸಂಸದ ರಮೇಶ ಜಿಗಜಿಣಗಿ ನೇತೃತ್ವ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

GST BJP SMBRAMACHARANE
ವಿಜಯಪುರ ನಗರದ ್ರೀ ಸಿದ್ಧೇಶ್ವರ ದೇವಸ್ಥಾನದ ಎದುರು ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಿಸಿದರು. ಸಂಸದ ರಮೇಶ ಜಿಗಜಿಣಗಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಗುರುಲಿಂಗಪ್ಪ ಅಂಗಡಿ ಮತ್ತಿತರರಿದ್ದಾರೆ.
Published on

ವಿಜಯಪುರ: ಜೀವನಾವಶ್ಯಕ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸುವ ಮೂಲಕ ಜನ ಸಾಮಾನ್ಯರ ಮೇಲೆ ಆರ್ಥಿಕ ಹೊರೆ ಕಡಿಮೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಐತಿಹಾಸಿಕ ನಿರ್ಣಯ ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ವಿಜಯೋತ್ಸವ ಆಚರಿಸಿದರು.

ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಒಬ್ಬ ನೈಜ ಜನನಾಯಕ. ದೇಶದ ಬಡವರು ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ತೊಂದರೆ ಎದುರಿಸಬಾರದು ಎಂದು ಅವುಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸಿದ್ದಾರೆ. ದೇಶದ ಆರ್ಥಿಕ ಇತಿಹಾಸದಲ್ಲಿಯೇ ಇದೊಂದು ಚಾರಿತ್ರಿಕ ಕಾರ್ಯಕ್ರಮವಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎನ್ನುವ ಅವರ ಧ್ಯೇಯದಂತೆ ಅನೇಕ ಯೋಜನೆಗಳನ್ನು ಮೋದಿಜಿ ಅನುಷ್ಠಾನಗೊಳಿಸಿದ್ದಾರೆ ಎಂದರು.

ಪ್ರಧಾನಿ ಮೋದಿ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಸಂಸದನಾಗಿ ಆಯ್ಕೆಯಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದರಲ್ಲದೇ, ಜೀವನಾವಶ್ಯಕ ವಸ್ತುಗಳ ಬೆಲೆ ಇಳಿಕೆ ನೇರವಾಗಿ ಬಡವರಿಗೆ ವರದಾನವಾಗಿದೆ. ಆ ಮೂಲಕ ಮೋದಿಜಿ ತಮ್ಮ ಕಳಕಳಿ ತೋರಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

ಅನೇಕ ಐತಿಹಾಸಿಕ ಅಭಿವೃದ್ಧಿ ಪರ, ಜನಪರ ನಿರ್ಧಾರ ಕೈಗೊಂಡಿರುವ ಮೋದಿಜಿ ನಮ್ಮ ದೇಶ ಕಂಡ ಅಪೂರ್ವ ನಾಯಕ ಎಂದು ಬಣ್ಣಿಸಿದರು.

ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ವಿಜುಗೌಡ ಪಾಟೀಲ, ಡಾ.ಸುರೇಶ ಬಿರಾದಾರ, ಉಮೇಶ ಕೋಳಕೂರ, ಉಮೇಶ ಕಾರಜೋಳ, ಸಂಜೀವ ಐಹೊಳಿ, ಸಂಜಯ ಪಾಟೀಲ ಕನಮಡಿ, ಮಳುಗೌಡ ಪಾಟೀಲ, ಸಂದೀಪ ಪಾಟೀಲ, ರಾಜಶೇಖರ ಮಗಿಮಠ, ಮಲ್ಲಿಕಾರ್ಜುನ ಜೋಗೂರ, ಅಪ್ಪು ಕುಂಬಾರ, ಎಸ್.ಎ. ಪಾಟೀಲ, ಬಸವರಾಜ ಹಳ್ಳಿ, ಎಸ್.ಎ. ಪಾಟೀಲ, ಸಿದ್ದಗೊಂಡ ಬಿರಾದಾರ, ಚಿನ್ನು ಚಿನಗುಂಡಿ, ರವೀಂದ್ರ ಲೋಣಿ, ಚಿದಾನಂದ ಚಲವಾದಿ, ಪಾಪುಸಿಂಗ್ ರಜಪೂತ, ಆನಂದ ಮುಚ್ಚಂಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net