ವಕ್ಫ್‌ಬೋರ್ಡ್ ಹೆಸರಿನಲ್ಲಿರುವ ಆಸ್ತಿ ಪರಿಶೀಲಿಸಿ: ಬಿಜೆಪಿ ಕಾರ್ಯಕರ್ತರಿಂದ ಮನವಿ ಸಲ್ಲಿಕೆ

BJP workers demand inspection of Waqf property Mandya
Published on

ಮಂಡ್ಯ: ಜಿಲ್ಲೆಯ 620 ಆಸ್ತಿಗಳು ವಕ್ಫ್‌ಬೋರ್ಡ್ ಹೆಸರಿನಲ್ಲಿದ್ದು, ಅವುಗಳನ್ನು ಪರಿಶೀಲಿಸಿ ರಾಜ್ಯಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ್ ರೋಹಿಣಿ ಅವರಿಗೆ ಮನವಿ ನೀಡಿದ ಕಾರ್ಯಕರ್ತರು, ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿ ಹೆಸರಿನಲ್ಲಿರುವ ಪರಿಶೀಲಿಸಿ ಸರ್ಕಾರಿ ಜಮೀನು, ಕೆರೆ, ಕಟ್ಟೆ ಗೋಮಾಳಗಳನ್ನು ಸರ್ಕಾರವು ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 1961ರಲ್ಲಿ ವಕ್ಫ್‌ಬೋರ್ಡ್ ಮಂಡಳಿ ರಚನೆಯಾಗಿದ್ದು, 1973ರಲ್ಲಿ ವಕ್ಫ್‌ಬೋರ್ಡ್ ಆಸ್ತಿಗಳು ಕಂದಾಯ ಇಲಾಖೆಯ ವಶದಲ್ಲಿದ್ದವು. ಮುಜರಾಯಿ ಆಯುಕ್ತರು ಮೇಲ್ವಿಚಾರಣೆ ಮಾಡುತ್ತಿದ್ದು, ನಂತರದ ದಿನಗಳಲ್ಲಿ ವಕ್ಫ್‌ಬೋರ್ಡ್ ವಶಕ್ಕೆ ಈ ಆಸ್ತಿಗಳು ಬಂದಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ರಾಜ ಮಹಾರಾಜರು ನೀಡಿದ್ದರು ಎನ್ನಲಾದ ಶೇ.99 ರಷ್ಟು ಆಸ್ತಿಗಳಿಗೆ ನಿಖರವಾದ ಯಾವುದೇ ದಾಖಲಾತಿಗಳೂ ಇರುವುದಿಲ್ಲ ಎಂದು ಆರೋಪಿಸಿದರು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಗೋಮಾಳಗಳು, ಅರಣ್ಯ ಭೂಮಿಗಳು, ದೇವಾಲಯದ ಜಾಗಗಳು, ಮಠ ಮಂದಿರದ ಜಾಗಗಳು, ಕೆರೆ, ಕುಂಟೆ, ಗುಂಡು ತೋಪು, ಕಾವಲ್ ಭೂಮಿಗಳೆನ್ನದೆ ಎಲ್ಲವನ್ನೂ 1962 ಗೆಜೆಟ್ ನೋಟಿಫಿಕೇಷನ್ ಮಾಡಿದ್ದು, ಇಡೀ ರಾಜ್ಯದ ಆಸ್ತಿಗಳಲ್ಲಿ ನ್ಯೂನತೆಯಿದ್ದು, ವಕ್ಫ್‌ಬೋರ್ಡ್ ಪ್ರಸ್ತುತ ತಮ್ಮ ಬಳಿ 43,599 ಎಕರೆ ಆಸ್ತಿ ಇದೆ ಎಂದಿದೆ. ಅವೆಲ್ಲವನ್ನು ಹಿಂಪಡೆಯಬೇಕು. ವಿಶೇಷವಾಗಿ ಜಿಲ್ಲೆಯ ಕ್ಯಾತನಹಳ್ಳಿ, ಕೆರೆತೊಣ್ಣೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಜಮೀನು ವಕ್ಫ್‌ಬೋರ್ಡ್‌ನಿಂದ ಕಬಳಿಕೆಯಾಗಿದೆ. ಈ ಬಗ್ಗೆ ರಾಜ್ಯ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ, ಇವೆಲ್ಲವನ್ನೂ ಪರಿಗಣಿಸಿ ದೇಶದ ಆಸ್ತಿಯನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮುಖಂಡರಾದ ಪ್ರಸನ್ನ, ಬಿ.ಕೃಷ್ಣ, ಶಿವಕುಮಾರ್, ಸಿದ್ದರಾಜು, ಶಿವಲಿಂಗು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net