ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವ ಹಕ್ಕು ಉಲ್ಲಂಘನೆ: ಬಿಜೆಪಿ ಕಾರ್ಯಕರ್ತರಿಂದ ಪೊಲೀಸ್ ದೂರು ಪ್ರಾಧಿಕಾರಕ್ಕೆ ಮನವಿ

BJP workers appeal to Police Complaints Authority Mandya
Published on

ಮಂಡ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದಿದ್ದರೂ ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕ ಹಿತಾಸಕ್ತಿಯ ವ್ಯಕ್ತಿಗಳ ಮನೆಗೆ ರಾತ್ರಿ ಭೇಟಿ ನೀಡುವ ಮೂಲಕ ಮಾನವ ಹಕ್ಕಗಳ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ದೂರು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ತೆರಳಿದ ಕಾರ್ಯಕರ್ತರು ಪ್ರಾಧಿಕಾರದ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಎಸ್.ಕೆ. ಸುಧೀಂದ್ರರಾವ್ ಅವರಿಗೆ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮೂಲಕ ಮನವಿ ಸಲ್ಲಿಸಿದರು. ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ವ್ಯಕ್ತಿಗಳ ಮನೆಗಳಿಗೆ ತಡರಾತ್ರಿ ಭೇಟಿ ನೀಡಿ ಪೊಲೀಸರು ಕಾನೂನು ಆದೇಶ ಅಥವಾ ಸೂಕ್ತ ಪ್ರಕ್ರಿಯೆಯಿಲ್ಲದೆ ವ್ಯಕ್ತಿಗಳ ಛಾಯಾಚಿತ್ರವನ್ನು ಜಿಪಿಎಸ್ ಸ್ಥಳಗಳನ್ನು ನಮೂದಿಸುತ್ತಿದ್ದಾರೆ. ಈ ನಡವಳಿಕೆ ಸಂವಿಧಾನದಡಿ ಗೌಪ್ಯತೆಯ ಹಕ್ಕು ಮತ್ತು ಬಕುವ ಹಕ್ಕಿನ ನೇರ ಮತ್ತು ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ಇದರಿಂದಾಗಿ ಸಂವಿಧಾನದ 14, 17, 19 ಮತ್ತು 21ನೇ ವಿಧಿಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಇದರಿಂದ ಘನತೆ ಮತ್ತು ಮಾನಸಿಕ ಶಾಂತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಯಾವುದೇ ವ್ಯಕ್ತಿ ಅವಥವಾ ಗುಂಪನ್ನು ಕೋಮುವಾದಿ ಎಂದು ಹಣೆಪಟ್ಟಿ ಕಟ್ಟಲು ಅಥವಾ ನ್ಯಾಯಾಂಗ ಪ್ರಾಧಿಕಾರವಾಗಿ ಕಾರ್ಯ ನಿರ್ವಹಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕಾನೂನು ಬದ್ಧವಾಗಿ ಅಧಿಕಾರವಿಲ್ಲದಿದ್ದರೂ ಇಂತಹ ಕ್ರಮಗಳ ಮೂಲಕ ವ್ಯಕ್ತಿಯ ಹಕ್ಕು ಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಹಿನ್ನೆಲೆಯಲ್ಲಿ, ಪೊಲೀಸ್ ದೂರು ಪ್ರಾಧಿಕಾರವು ಈ ವಿಷಯವನ್ನು ತಕ್ಷಣ ಗಮನದಲ್ಲಿಟ್ಟುಕೊಂಡು, ಅಮಾಯಕರ ಮನೆಗಳಿಗೆ ತಡರಾತ್ರಿ ಭೇಟಿ ನೀಡುವುದನ್ನು ನಿಲ್ಲಿಸುವಂತೆ ನಿರ್ದೇಶಿಸಬೇಕು. ಕಳೆದ ಏಳು ದಿನಗಳಲ್ಲಿ ಈ ಭೇಟಿಗಳ ಉದ್ದೇಶ, ಕಾನೂನು ಆಧಾರ ಮತ್ತು ದಾಖಲೆಗಳನ್ನು ವಿವರಿಸುವ ವರದಿಯನ್ನು ದಕ್ಷಿಣ ಕನ್ನಡ ಎಸ್‌ಪಿ ಅವರಿಂದ ಪಡೆಯಬೇಕು. ಈ ಉಲ್ಲಂಘನೆಗಳನ್ನು ಪರಿಶೀಲಿಸಲು ಮತ್ತು ಜವಾಬ್ದಾರಿಯುತರನ್ನು ಕಾನೂನಿನ ಅಡಿಯಲ್ಲಿ ಹೊಣೆಗಾರರನ್ನಾಗಿ ಮಾಡಲು ವಿವರವಾದ ಮತ್ತು ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ಮಾದರಾಜೇ ಅರಸು, ಎಲ್ಲೇಗೌಡ, ಶಿವಣ್ಣ ಗೊರವಾಲೆ, ಆನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net