

ಮಂಡ್ಯ: ಕೃಷ್ಣರಾಜಸಾಗರ ಜಲಾಶಯದಲ್ಲಿ ಅಳವಡಿಸಲಾಗಿದ್ದ ಹಳೆಯ ಕ್ರಸ್ಟ್‌ಗೇಟ್‌ಗಳನ್ನು ಮಾರಾಟ ಮಾಡದಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಕುಮಾರ್‌ಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಫಲವಾಗಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿ 150 ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಿದ್ದರು. ಮಂಡ್ಯ ಸೇರಿದಂತೆ ಹಲವು ಜಿಲ್ಲೆಗೆ ವ್ಯವಸಾಯ ಮತ್ತು ಕುಡಿಯುವ ನೀರಿನ ಉದ್ದೇಶದೊಂದಿಗೆ ಅಂದು 2.50 ಕೋಟಿ ರೂ ವೆಚ್ಚದಲ್ಲಿ ಜಲಾಶಯ ನಿರ್ಮಾಣವಾಗಿತ್ತು. ನೀರಿನ ಹರಿವನ್ನು ನಿರ್ವಹಣೆ ಮಾಡಲು 608 ಟನ್ ತೂಗದ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿತ್ತು. ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಇಂತಹ ಕ್ರಸ್ಟ್ ಗೇಟ್‌ಗಳನ್ನು ಅಂದೇ ಮಹಾರಾಜರು ಅಳವಡಿಸಿದ್ದರು. ಇತ್ತೀಚೆಗೆ ನೀರಿನ ಸೋರಿಕೆ ಹೆಚ್ಚಾದ ಕಾರಣ ಹಳೇಯದ್ದನ್ನು ಹಂತ ಹಂತವಾಗಿ ಬದಲಾವಣೆ ಮಾಡಿ ಹಳೆಯದ್ದನ್ನು ತೆಗೆಯಲಾಗಿದೆ. ಆದರೆ ಹಳೆಯದಾದ ಕಾರಣ ಕ್ರಸ್ಟ್ ಗೇಟ್‌ಗಳನ್ನು ಪ್ರತಿ ಕೆ.ಜಿ.ಗೆ 6 ರೂ.ಗಳಂತೆ ಕೇವಲ 32 ಲಕ್ಷ ರೂ.ಗಳಿಗೆ ಮಾರಾಟ ಮಾಡಲು ರಾಜ್ಯಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಚನ್ನೈ ಮತ್ತು ಬೆಂಗಳೂರಿನ ಮಾರುಕಟ್ಟೆ ಅಂದಾಜಿನ ಪ್ರಕಾರ ಪ್ರತಿ ಕೆ.ಜಿ.ಗೆ 40 ರಿಂದ 45 ರೂ.ಗಳು ಆಗುತ್ತಿದೆ. ಆದರೆ ಸರ್ಕಾರ ತರಾತುರಿಗೆ ಪ್ರತಿ ಕೆಜಿಗೆ ಕೇವಲ 6 ರೂ.ಗಳಿಗೆ ಮಾರಾಟ ಮಾಡುವ ಅವಶ್ಯಕತೆಯಾದರೂ ಏನಿದೆ?. ಕೆಆರ್‌ಎಸ್‌ನಲ್ಲಿ ಈಗ ಅಳವಡಿಸಿರುವ ಕ್ರಸ್ಟ್‌ಗೇಟ್‌ಗಳಿಗೆ ತೊಂದರೆ ಎದುರಾದಾಗ ಹಳೆಯ ಗೇಟ್‌ಗಳನ್ನೇ ತಾತ್ಕಾಲಿಕವಾಗಿ ಅಳವಡಿಸಿ ನೀರಿನ ಪೋಲಾಗುವುದನ್ನು ತಪ್ಪಿಸಬಹುದು. ಆದ್ದರಿಂದ ಹಳೆಯ ಕ್ರಸ್ಟ್ ಗೇಟ್‌ಗಳನ್ನು ಮಾರಾಟ ಮಾಡದೆ ಕೆಆರ್‌ಎಸ್ ಸಂಶೋಧನಾ ಕೇಂದ್ರದಲ್ಲಿ ಅವುಗಳನ್ನು ಇಟ್ಟುಕೊಂಡು ಕಾಪಾಡುವಂತೆ ಮನವಿ ಮಾಡಿದ್ದಾರೆ.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ಹೊಸಹಳ್ಳಿ ಮಂಜುನಾಥ್, ರಘು, ನಂದೀಶ್, ಬಿ.ಟಿ.ಶಿವಲಿಂಗಯ್ಯ, ಸಿ.ಎಂ.ಜವರೇಗೌಡ, ಆನಂದ್ ಇದ್ದರು.