ಪಾಕ್ ಪರ ಘೋಷಣೆ, ಬಿಜೆಪಿ ಕಾರ್ಯಕರ್ತನ ಬಂಧನ: ಇಬ್ಬರ ವಿರುದ್ಧ ಎಫ್‌ಐಆರ್ ದಾಖಲು

arrested
Published on

ಮಂಡ್ಯ: ಬೆಂಗಳೂರು ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆನ್ನುವ ವಿವಾದ ಕಾವೇರಿರುವ ಹೊತ್ತಲ್ಲೇ ಜಿಲ್ಲೆಯಲ್ಲಿ 2022ರಲ್ಲಿ ನಡೆದಿದ್ದ ಪ್ರಕರಣವೊಂದು ಮರುಜೀವ ಪಡೆದುಕೊಂಡಿದೆ. ಪ್ರತಿಭಟನೆ ಸಮಯದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಈ ಪೈಕಿ ಒರ್ವನನ್ನು ಬಂಧಿಸಲಾಗಿದೆ.

ಬಿಜೆಪಿ ಕಾರ್ಯಕರ್ತರಾದ ಉಪ್ಪರಕನಹಳ್ಳಿ ಆರಾಧ್ಯ ಹಾಗೂ ಡಣಾಯಕನಪುರ ಗ್ರಾಮದ ರವಿ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಂತೆಯೇ ರವಿ ಎಂಬಾತನನ್ನು ಸೋಮವಾರ ತಡರಾತ್ರಿ ವಶಕ್ಕೆ ಪಡೆಯಲಾಗಿದೆ.

ಏನಿದು ಘಟನೆ?: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ವಿರುದ್ಧ 2022 ಡಿ.17ರಂದು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಸಮಯದಲ್ಲಿ ಪಾಕಿಸ್ತಾನ್ ಮುರ್ದಾಬಾದ್, ಹಿಂದುಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದರು. ಘೋಷಣೆ ಕೂಗುವಾಗ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆನ್ನುವ ವಿಡಿಯೋ ಹರಿದಾಡುತ್ತಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡ ಕನ್ನಂಬಾಡಿ ಕುಮಾರ್ ಎಂಬಾತ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ಎಫ್‌ಐಆರ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net