

ಕೋಲಾರ: ಅಪ್ಪ-ಮಕ್ಕಳ ಅಥವಾ ವಂಶಪಾರಂಪರ್ಯ ಆಡಳಿತಕ್ಕೆ ಮಣೆಹಾಕುವ ಪಕ್ಷ ಬಿಜೆಪಿಯಲ್ಲ. ಪಕ್ಷದಲ್ಲಿ ಹಣ, ಜಾತಿಗೆ ಮಾನ್ಯತೆಯಿಲ್ಲ. ಪಕ್ಷ ನಿಷ್ಟೆ, ದುಡಿಮೆಯನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಕಾಮಧೇನುಹಳ್ಳಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದಿಂದ ಮಂಗಳವಾರ ನಡೆದ ಪ್ರಶಿಕ್ಷಣ ತರಬೇತಿ ಶಿಬಿರದಲ್ಲಿ ಮಾತನಾಡಿ, ರಾಜ್ಯಸಭಾ ಟಿಕೆಟ್ ಓರ್ವ ಸಾಮಾನ್ಯ ಕಾರ್ಯಕರ್ತರಿಗೆ ನೀಡಿದ ಉದಾಹರಣೆ ಬೇರೆ ಪಕ್ಷಗಳಲ್ಲಿಲ್ಲ. ಅಲ್ಲಿ ಜಾತಿ, ಹಣದ ಲೆಕ್ಕಾಚಾರ ನಡೆಯುತ್ತದೆ. ಆದರೆ ಬಿಜೆಪಿಯಲ್ಲಿ ಕಾರ್ಯಕರ್ತರೇ ಪಕ್ಷದ ದೊಡ್ಡಶಕ್ತಿ. ಹೀಗಾಗಿ ಪ್ರತಿಯೊಬ್ಬರೂ ಕೂಡ ಬಿಜೆಪಿ ಕಾರ್ಯಕರ್ತ ಎನ್ನಲು ಹೆಮ್ಮೆ ಪಡಬೇಕು ಎಂದರು.
ಕಳೆದ 36 ವರ್ಷಗಳಿಂದ ಜಾರಿಯಲ್ಲಿರುವ ಶಿಕ್ಷಣ ನೀತಿ ಬದಲಿಸಿ ಕೌಶಲಭರಿತ ಭಾರತ ನಿರ್ವಣದ ಕನಸನ್ನು ಹೊತ್ತ ಹೊಸ ಶಿಕ್ಷಣ ನೀತಿಯನ್ನು ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ರಾಜ್ಯದಲ್ಲೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದರು.
ಪ್ರವಾಹ ಮತ್ತು ಕರೊನಾ ನಡುವೆಯೂ ಯಡಿಯೂರಪ್ಪ ಸರ್ಕಾರ ಆರ್ಥಿಕ ಸುಧಾರಣೆಯೊಂದಿಗೆ ಜನಪರ ಕಾರ್ಯಕ್ರಮದ ಮೂಲಕ ಜನಮನ್ನಣೆ ಪಡೆದಿದೆ. ಪ್ರವಾಹ ಸಂತ್ರಸ್ತರಿಗಾಗಿ 6,018 ಕೋಟಿ ವೆಚ್ಚ ಮಾಡಲಾಗಿದೆ. 197 ಕೋಟಿ ರೂ.ಸಿರಿಧಾನ್ಯಗಳ ಆಹಾರಕ್ಕಾಗಿ ಮೀಸಲಿಡಲಾಗಿದೆ. 23 ಲಕ್ಷ ರೈತರಿಗೆ ಬೆಳೆ ವಿಮೆ ಪರಿಹಾರ ಸೇರಿ ವಿವಿಧ ಜನಪರ ನೆರವು ಒದಗಿಸಲಾಗಿದೆ ಎಂದರು. ಕಾರ್ಯಕರ್ತರು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಗ್ರಾಮಾಂತರ ಅಧ್ಯಕ್ಷ ಸಿ.ಡಿ.ರಾಮಚಂದ್ರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ಗ್ರಾಮಾಂತರ ಅಧ್ಯಕ್ಷ ಶಶಿಕುಮಾರ್, ಜಿಲ್ಲಾ ರೈತ ಮೋರ್ಚಾ ಖಜಾಂಚಿ ರಾಜೇಶ್ ಗೌಡ, ಗೋವಿಂದಸ್ವಾಮಿ, ವಿ.ಶ್ರೀನಿವಾಸ್ ಮತ್ತಿತರರಿದ್ದರು.