

ನೆಲಮಂಗಲ: ಶಿರಾ ಹಾಗೂ ಬೆಂಗಳೂರಿನ ಆರ್.ಆರ್. ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನೆಲಮಂಗಲ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಿಸಿದರು.
ನಗರದ ಪರಮಣ್ಣ ಬಡಾವಣೆಯಲ್ಲಿ ಇರುವ ಬಿಜೆಪಿ ಕಾರ್ಯಲಯದ ಬಳಿ ಮಂಗಳವಾರ ಬೆಳಗ್ಗಿನಿಂದಲೇ ಸಮಾವೇಶಗೊಂಡಿದ್ದ ನೂರಾರು ಕಾರ್ಯಕರ್ತರು, ಮುಖಂಡರು ಉಪಚುನಾವಣಾ ಫಲಿತಾಂಶ ವೀಕ್ಷಿಸಿದ್ದಲ್ಲದೇ ಫಲಿತಾಂಶ ಹೊರಬೀಳುತ್ತಿದ್ದಂತೆ ನಗರದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು. ಪರಸ್ಪರ ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚಿ, ಕುಣಿದು ಕುಪ್ಪಳಿಸಿ ವಿಜಯೋತ್ಸವ ಆಚರಿಸಿದರು.
ಮಾಜಿ ಶಾಸಕ ಎಂ.ವಿ. ನಾಗರಾಜು ಮಾತನಾಡಿ, ಸಿಎಂ ಬಿ.ಎಸ್. ಯಡಿಯೂರಪ್ಪ ಅಭಿವೃದ್ಧಿ ಪರವಾದ ಆಡಳಿತ ಮತ್ತು ನಾಯಕತ್ವವನ್ನು ಒಪ್ಪಿಕೊಂಡಿರುವ ಜನತೆ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಿದ್ದಾರೆ. ಶಿರಾ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ದಕ್ಕಿಸಿಕೊಡುವ ಮೂಲಕ ಸಿಎಂ ಪುತ್ರ ವಿಜಯೇಂದ್ರ ನೇತೃತ್ವದ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಆರ್.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಮೂರನೇ ಬಾರಿ ಗೆಲವು ಸಾಧಿಸಿದ್ದು ಸಂತೋಷವನ್ನುಂಟು ಮಾಡಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಉಪಚುನಾವಣಾ ಫಲಿತಾಂಶ ಸಹಕಾರಿಯಾಗಲಿದೆ ಎಂದರು.
ನೆ.ಯೋ. ಪ್ರಾಧಿಕಾರ ಅಧ್ಯಕ್ಷ ಎಸ್. ಮಲ್ಲಯ್ಯ, ನಗರಸಭೆ ಸದಸ್ಯ ಎನ್. ಗಣೇಶ್, ಎನ್.ಎಸ್. ಪೂರ್ಣಿಮಾ ಸುಗ್ಗರಾಜು, ತಾಲೂಕು ಅಧ್ಯಕ್ಷ ಹೇಮಂತ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ವಕೀಲ ರವಿ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ವೇದಾವತಿ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎ. ರಾಹುಲ್‌ಗೌಡ, ತಾಲೂಕು ಅಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಎನ್.ಸಿ. ರುದ್ರೇಶ್, ಮುಖಂಡರಾದ ಭವಾನಿಶಂಕರ್ ಬೈರೇಗೌಡ, ಕರಿವರದಯ್ಯ, ಕೆ.ಪಿ. ಭೃಂಗೀಶ್, ಎಚ್.ಬಿ. ಮಂಜುನಾಥ್, ರಾಮಕೃಷ್ಣಪ್ಪ, ಮುದ್ದುಮಾರೇಗೌಡ, ಸುರೇಶ್, ಸತೀಶ್, ಪ್ರಕಾಶ್, ರಾಜಮ್ಮ ಪ್ರಕಾಶ್, ದಾಕ್ಷಾಯಣಮ್ಮ, ಅನಸೂಯ, ಮೊಹಮ್ಮದ್‌ಶೇಖ್, ಎಚ್. ಬೈಲಪ್ಪ, ಚಿಕ್ಕಹನುಮಯ್ಯ, ಹನುಮಯ್ಯ ಮತ್ತಿತರರು ಇದ್ದರು.