370ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿ ಗೆಲುವು

BJP wins in more than 370 constituencies
ಕಲಾದಗಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಮುರುಗೇಶ ನಿರಾಣಿ ಮಾತನಾಡಿದರು. ಮುಖಂಡರಾದ ಕೆ.ಆರ್. ಶಿಲ್ಪಿ, ಶಿವಣ್ಣ ಅಂಗಡಿ, ಕೆ.ಎಲ್. ಬಿಲಕೇರಿ ಇತರರಿದ್ದರು.
Published on

ಕಲಾದಗಿ: ಪ್ರಧಾನಿ ಮೋದಿ ಮುಂದಾಳತ್ವದಲ್ಲಿ ಭಾರತೀಯ ಜನತಾ ಪಕ್ಷ ದೇಶದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದ್ದು, ಬರುವ ಲೋಕಸಭೆ ಚುನಾವಣೆಯಲ್ಲಿ ನಿಮ್ಮೆಲ್ಲರ ಪ್ರಯತ್ನದಿಂದ 370ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ಡಾ. ಮುರುಗೇಶ ನಿರಾಣಿ ಭವಿಷ್ಯ ನುಡಿದರು.

ಗ್ರಾಮದಲ್ಲಿ ಗುರುವಾರ ನಡೆದ ಬೀಳಗಿ ಮತಕ್ಷೇತ್ರದ ಕಲಾದಗಿ ಜಿಪಂ ಮತಕ್ಷೇತ್ರ ವ್ಯಾಪ್ತಿಯ ಬಿಜೆಪಿ ಪ್ರಮುಖ ಕಾರ್ಯಕರ್ತರ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಜಗತ್ತಿನಲ್ಲಿ ಸರ್ವ ರೀತಿಯಿಂದಲೂ ಭಾರತ ಮುಂಚೂಣಿಯಲ್ಲಿದೆ. ಇನ್ನಷ್ಟು ಅಭಿವೃದ್ಧಿಗೆ ಮೂರನೇ ಬಾರಿಗೆ ಮೋದಿ ಅವರು ಪ್ರಧಾನಿ ಆಗಲೇಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರು ಪಿ.ಸಿ. ಗದ್ದಿಗೌಡರ ಅವರೇ ನರೇಂದ್ರ ಮೋದಿ ಎಂಬಂತೆ ತಿಳಿದು ಪ್ರಚಾರ ನಡೆಸಿ ಚುನಾವಣೆ ಗೆಲ್ಲಬೇಕು ಎಂದರು.

ಜಿಲ್ಲೆಯಲ್ಲಿ ಒಂದು ವಿಮಾನ ನಿಲ್ದಾಣ ನಿರ್ಮಿಸಿಲ್ಲ ಎಂಬ ಮಾಜಿ ಶಾಸಕ ಆನಂದ ನ್ಯಾಮಗೌಡರ ಹೇಳಿಕೆಗೆ ಪ್ರಸ್ತಾಪಿಸಿದ ಅವರು, ನ್ಯಾಮಗೌಡರೇ ನಿಮಗಿಷ್ಟು ಗೊತ್ತಿಲ್ಲವೇ? ನಾನೇ ಹಲಕುರ್ಕಿಯಲ್ಲಿ 1,600 ಎಕರೆ ಪ್ರದೇಶದಲ್ಲಿ ವಿಮಾಣ ನಿಲ್ದಾಣ ಸ್ಥಾಪನೆಗೆ ಕ್ರಮ ಕೈಗೊಂಡಿದ್ದೆ. ಆದರೆ ಇದು ನಿರ್ಮಾಣವಾಗದಂತೆ, ರೈತರು ಭೂಮಿ ಕೊಡದಂತೆ ಮಾಡಿದ್ದು ನಿಮ್ಮ ಕಾಂಗ್ರೆಸ್ ನಾಯಕ ಶಾಸಕ ಜೆ.ಟಿ. ಪಾಟೀಲರು ಎಂಬುದು ಗೊತ್ತಿರಲಿ. ಇಲ್ಲವಾದಲ್ಲಿ ಇಷ್ಟೊತ್ತಿಗೆ ವಿಮಾನ ನಿಲ್ದಾಣ ನಿರ್ಮಾಣವಾಗಿರುತ್ತಿತ್ತು ಎಂದರು. ಬೆಲೆ ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಬಲಗೈಯಿಂದ ಕೊಟ್ಟು ಎಡಗೈಯಿಂದ ಕಿತ್ತುಕೊಳ್ಳುತ್ತಿದೆ ಎಂದು ಹರಿಹಾಯ್ದರು.

ಮುಖಂಡರಾದ ಕೆ.ಆರ್. ಶಿಲ್ಪಿ, ಶಿವಣ್ಣ ಅಂಗಡಿ, ಕೆ.ಎಲ್. ಬಿಲಕೇರಿ, ಹೂವಪ್ಪ ರಾಠೋಡ, ಲಚ್ಚಪ್ಪ ಹೊಸಮನಿ ಮಾತನಾಡಿದರು. ಲಕ್ಷ್ಮಣಗೌಡ, ವೆಂಕಟೇಶ ರಂಗನ್ನವರ, ಬಶೆಟ್ಟಿ ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net