ಬಿಜೆಪಿ ಜಯಭೇರಿ ಬಾರಿಸಿ ವಿಜಯಮಾಲೆ ಧರಿಸಲಿದೆ

BJP WINS ELECTION
ಮಹಾಲಿಂಗಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಸಚಿವ ಗೋವಿಂದ ಕಾರಜೋಳ ಮಾತನಾಡಿದರು. ಜಮಖಂಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಇದ್ದರು.
Published on

ಮಹಾಲಿಂಗಪುರ: ದೇಶದಲ್ಲಿ ಬಿಜೆಪಿ ಎಲ್ಲ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಸಿಗುವಂತೆ ಮಾಡಿದ್ದು, ಎಸ್‌ಸಿ, ಎಸ್‌ಟಿ, ಲಿಂಗಾಯತ, ಒಕ್ಕಲಿಗರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಸೂಕ್ತ ಮೀಸಲಾತಿ ನೀಡಿದ್ದಾರೆ.ಅಧಿಕಾರ ವಂಚಿತರಿಗೆ ನ್ಯಾಯ ಸಿಕ್ಕಿದ್ದು, ರಾಜ್ಯದಲ್ಲಿ ಬಿಜೆಪಿ ಜಯಭೇರಿ ಬಾರಿಸಿ ವಿಜಯಮಾಲೆ ಧರಿಸಲಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಸ್ಥಳೀಯ ಮಹಾಂತೇಶ ಹಿಟ್ಟಿನಮಠ ಅವರ ನಿವಾಸದ ಆವರಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಅವರಿಂದ ಪ್ರಪಂಚದ ಎರಡು ನೂರು ದೇಶಗಳಲ್ಲಿ ಭಾರತ ದೇಶದ ಕೀರ್ತಿ ಮತ್ತು ಪ್ರತಿಷ್ಠೆ ಹೆಚ್ಚಿದೆ. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ದೊರೆತಿದೆ. ಹೆಣ್ಣುಮಕ್ಕಳು ಸರ್ಕಾರದ ವಿಶೇಷ ಶಿಕ್ಷಣ ಸೌಲಭ್ಯ ಪಡೆದಿದ್ದಾರೆ. ನೂರಾರು ಯೋಜನೆಗಳನ್ನು ಪ್ರತಿ ಕುಟುಂಬಕ್ಕೂ ಮುಟ್ಟಿಸುವ ಕೆಲಸ ನರೇಂದ್ರ ಮೋದಿ ಸರ್ಕಾರ ಮಾಡಿದೆ ಎಂದರು.

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಮ್ಮನ್ನು ಅಹಿಂದ ನಾಯಕ ಅಂತ ಹೇಳಿಕೊಳ್ಳುತ್ತಿದ್ದಾರೆ. ಅವರು ಅಹಿಂದ ನಾಯಕರಲ್ಲ. ಮುಗ್ಧ ಜನತೆಯನ್ನು ಹಿಂದೆ ತಳ್ಳುವ ನಾಯಕ. ಈ ದೇಶದ ಪ್ರಧಾನಿ ಮೋದಿ ಅವರು ಹಿಂದುಳಿದ ವರ್ಗದಿಂದ ಬಂದವರು. ದೇಶದ ಪ್ರಧಾನಿಯಾದ ಅವರ ಬಗ್ಗೆ ಗೌರವದ ಮಾತನಾಡುವ ಸೌಜನ್ಯ ಸಿದ್ದರಾಮಯ್ಯಗಿಲ್ಲ ಎಂದರು.

ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ ಮಾತನಾಡಿ, ಕೇವಲ ಉಚಿತ ಅಕ್ಕಿ ನೀಡುವುದರಿಂದ ಬಡವರ ಬದುಕು ಹಸನಾಗುವುದಿಲ್ಲ. ಅವರಿಗೆ ಶಿಕ್ಷಣ ಮತ್ತು ಉದ್ಯೋಗ ನೀಡಿ ಅವರೇ ಇನ್ನೊಬ್ಬರಿಗೆ ಅಕ್ಕಿ ನೀಡುವಷ್ಟು ಸಬಲರನ್ನಾಗಿಸಲು ಬಿಜೆಪಿ ಶ್ರಮಿಸುತ್ತಿದೆ ಎಂದರು.

ಬಿಜೆಪಿ ಮುಖಂಡರಾದ ಬಸನಗೌಡ ಪಾಟೀಲ, ಆರ್.ಟಿ.ಪಾಟೀಲ, ಮಹಾಂತೇಶ ಹಿಟ್ಟಿನಮಠ, ಬಸವರಾಜ ದೊಡ್ಡಹಟ್ಟಿ, ಹಣಮಂತ ತುಳಸಿಗೇರಿ, ಎಂ.ಐ.ಕೋಳಿಗುಡ್ಡ, ನಾಗಪ್ಪ ಅಂಬಿ, ರಾಜು ಯಡಹಳ್ಳಿ, ಶ್ರೀಶೈಲಗೌಡ ಪಾಟೀಲ, ಬಸವರಾಜ ಹಿಟ್ಟಿನಮಠ, ಮಹಾಲಿಂಗಪ್ಪ ಕುಳ್ಳೋಳ್ಳಿ, ಜಿ.ಎಸ್.ಗೊಂಬಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net