

ಮಂಜುನಾಥ ತಿಮ್ಮಯ್ಯ ಮೈಸೂರು
ಯೋಗ್ಯರು, ಪ್ರಾಮಾಣಿಕರು, ಪಕ್ಷಕ್ಕಾಗಿ ದುಡಿದವರನ್ನು ಬಿಜೆಪಿ ಸದಾ ಗುರುತಿಸುತ್ತದೆ ಎಂಬುದಕ್ಕೆ ನನ್ನ ಆಯ್ಕೆಯೇ ಸಾಕ್ಷಿ. ಲಾಬಿ, ಗಾಡ್ ಫಾದರ್‌ಗಳು, ಕೆಲಸ ಮಾಡಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಮೇಘಾಲಯ ರಾಜ್ಯಪಾಲರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಸ್ಪಷ್ಟ ನುಡಿಗಳು ಇವು. ವಿಧಾನಸಭೆ, ವಿಧಾನಪರಿಷತ್, ಲೋಕಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಇವರಿಗೆ ಇದೀಗ ರಾಜ್ಯಪಾಲ ಹುದ್ದೆ ಲಭಿಸಿದೆ. ಈ ಸಂದರ್ಭದಲ್ಲಿ ಅವರೊಂದಿಗೆ ಚುಟುಕು ಸಂದರ್ಶನದ ಸಾರಾಂಶ ಇಲ್ಲಿದೆ.
ಪ್ರಶ್ನೆ: ಹೊಸ ಜವಾಬ್ದಾರಿ ದೊರೆತಿದೆ. ಏನು ಅನಿಸುತ್ತಿದೆ?
ವಿಜಯಶಂಕರ್: ಇದು ನಿಜಕ್ಕೂ ಜೀವನದಲ್ಲಿ ಸಿಕ್ಕ ಅಪರೂಪದ ಅವಕಾಶ. ಸಾರ್ವಜನಿಕ ಜೀವನದಲ್ಲಿ ಈ ರೀತಿ ಅನೇಕ ಅವಕಾಶಗಳನ್ನು ಪಕ್ಷ, ಸಂಘಟನೆ ಮತ್ತು ದೈವ ನನಗೆ ಮಾಡಿಕೊಟ್ಟಿದೆ. ದೈವ ಇಚ್ಛೆವಿಲ್ಲದೆ ಏನು ಸಿಗುವುದಿಲ್ಲ ಎಂಬ ನಂಬಿಕೆ ನನ್ನದು. 1994ರಲ್ಲಿ ಹುಣಸೂರು ಶಾಸಕನಾಗಿ, 1999 ಮತ್ತು 2004ರಲ್ಲಿ ಸಂಸದನಾಗುವ ಅವಕಾಶ ಲಭಿಸಿತ್ತು. ಬಳಿಕ ರಾಜಕೀಯವಾಗಿ ಹಿನ್ನಡೆಯಾಯಿತು. ಆಗ ಪಕ್ಷವು ಎಂಎಲ್‌ಸಿ ಮಾಡಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಸಚಿವ ಸ್ಥಾನ ನೀಡಿತು. ಹೀಗೆ ಅನೇಕ ಕೆಲಸ ಮಾಡುವ ಭಾಗ್ಯ ದೊರೆಯಿತು. ಇದೀಗ ಈ ಅವಕಾಶ ಸಿಕ್ಕಿದೆ. ಇದರಿಂದ ಬಹಳ ಸಂತೋಷವಾಗಿದೆ.
ಪ್ರಶ್ನೆ: ದೊಡ್ಡ ಜವಾಬ್ದಾರಿ ಹೇಗೆ ನಿರ್ವಹಿಸುತ್ತೀರಿ?
ವಿಜಯಶಂಕರ್: ರಾಜ್ಯಕ್ಕೆ ಮತ್ತು ಕನ್ನಡಿಗರಿಗೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುವೆ. ಕರ್ತವ್ಯಪ್ರಜ್ಞೆ, ಸಾಮಾಜಿಕ ಬದ್ಧತೆ, ಸ್ಥಾನದ ಹೊಣೆಗಾರಿಕೆ ಅರಿತು ಈ ಸ್ಥಾನವನ್ನು ನಿಭಾಯಿಸುವೆ. ಈ ವರೆಗೆ ನಾನು ಹೆಸರು ಕೆಡಿಸಿಕೊಂಡಿಲ್ಲ. ಮುಂದಿಯೂ ಹೀಗೆ ಮುಂದುವರಿಯುವ ಮೂಲಕ ಈ ಹುದ್ದೆಗೆ ಚ್ಯುತಿ ತರುವ ಕೆಲಸ ಮಾಡಲ್ಲ. ನನ್ನ ಮೇಲಿರುವ ವಿಶ್ವಾಸ-ನಂಬಿಕೆಯನ್ನು ಉಳಿಸಿಕೊಳ್ಳುವೆ.
ಪ್ರಶ್ನೆ: ಈ ಹಿಂದೆಯೂ ಮೈಸೂರಿನವರು ರಾಜ್ಯಪಾಲರು ಆಗಿದ್ದಾರೆ. ಅವರ ಸಾಲಿಗೆ ನೀವು ಸೇರಿಕೊಳ್ಳುತ್ತೀರಿ. ಏನು ಅನಿಸುತ್ತಿದೆ.
ವಿಜಯಶಂಕರ್: ಜಯಚಾಮರಾಜ ಒಡೆಯರ್ ರಾಜ್ಯಪಾಲರಾಗಿ ಮುದ್ರಾಸ್‌ನಲ್ಲಿ (ಈಗ ಚೆನ್ನೈ) ಕೆಲಸ ಮಾಡಿದ್ದರು. ನಮ್ಮ ಜಿಲ್ಲೆಯೇ ಆಗಿದ್ದ ಚಾಮರಾಜನಗರದ ಬಿ.ರಾಚಯ್ಯ, ಮಂಡ್ಯದ ಎಸ್.ಎಂ.ಕೃಷ್ಣ ರಾಜ್ಯಪಾಲರಾಗಿದ್ದರು. ಅವರ ಸಾಲಿನಲ್ಲಿ ನಿಂತು ಕೆಲಸ ಮಾಡುವ ಅವಕಾಶ ದೊರೆತಿದೆ. ಇದು ಹೆಮ್ಮೆಯ ಕ್ಷಣ.
ಪ್ರಶ್ನೆ: ಈ ಹುದ್ದೆ ಅಲಂಕರಿಸಿದರೆ ಸಕ್ರಿಯ ರಾಜಕಾರಣದಿಂದ ದೂರವಾಗಬೇಕಾಗುತ್ತದೆ ಅಲ್ವೇ?
ವಿಜಯಶಂಕರ್: ಇಲ್ಲ. ಹೊಣೆಗಾರಿಕೆ, ಜವಾಬ್ದಾರಿ ಹೊಂದಿದವರು ಸಾರ್ವಜನಿಕ ಜೀವನದಿಂದ ದೂರ ಆಗಲ್ಲ. ಇದು ವಿಭಿನ್ನ ಕೆಲಸ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವುದಿಲ್ಲ ಎಂಬ ಪ್ರಶ್ನೆ ಬರಲ್ಲ. ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವೆ. ನಾಡು-ಪಕ್ಷ, ಸಂಘಟನೆಯ ಋಣ ತೀರಿಸುವ ಕೆಲಸ ಮಾಡುವೆ. ನಾಡಿಗೆ ಗೌರವ ತರುವಂತೆ ನಡೆದುಕೊಳ್ಳವೆ.
ಪ್ರಶ್ನೆ: ಪ್ರತಿಯೊಂದು ಹುದ್ದೆ, ಅಧಿಕಾರ ಪಡೆಯಲು ಲಾಭಿ ಮಾಡಬೇಕು. ಗಾಡ್ ಫಾದರ್ ನೆರವು ಬೇಕು ಎಂಬ ಕಾಲಮಾನದಲ್ಲಿ ನಿಮಗೆ ಈ ಯಾವುದೂ ಇಲ್ಲದೇ ಹೊಸ ಅಧಿಕಾರ ದೊರೆತಿರುವುದಕ್ಕೆ ಕಾರಣ ಏನು?
ವಿಜಯಶಂಕರ್: ಸಂಘಟನೆಯ ನಿಷ್ಠಾವಂತರಿಗೆ, ಯೋಗ್ಯರಿಗೆ, ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಪಕ್ಷ ಸದಾ ಗುರುತಿಸುತ್ತದೆ. ಇವರೆಲ್ಲ ಪಕ್ಷ, ದೇಶದ ಆಸ್ತಿಗಳು. ಇಂತಹವರನ್ನು ಗುರುತಿಸಲಾಗುತ್ತದೆ ಎಂಬುದಕ್ಕೆ ನಾನು ಸಾಕ್ಷಿ. ಗಾಡ್ ಫಾದರ್ ಅಗತ್ಯ ಇಲ್ಲ. ಲಾಭಿ ಸಹ ಕೆಲಸ ಮಾಡಲ್ಲ.