ಸಚಿವರ ತಲೆದಂಡ ಆಗುವರೆಗೂ ಬಿಜೆಪಿ ಹೋರಾಟ: ಆರ್.ಅಶೋಕ್

ashok visit chandrasheakran home
ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರ ಪತ್ನಿ ಕವಿತಾ ಅವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಾಂತ್ವನ ಹೇಳಿದರು. ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಮಂಗೋಟೆ ರುದ್ರೇಶ್ ಇದ್ದರು.
Published on

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರನ್ ಅವರ ಮನೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಶುಕ್ರವಾರ ಮಧ್ಯಾಹ್ನ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಚಂದ್ರಶೇಖರನ್ ಪತ್ನಿ ಕವಿತಾ ಅವರೊಂದಿಗೆ ಚರ್ಚಿಸಿದ ವಿಪಕ್ಷ ನಾಯಕ, ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸಿದರು. ನಿಮ್ಮೊಂದಿಗೆ ನಾವಿದ್ದೇವೆ. ಧೈರ್ಯದಿಂದ ಇರಿ. ನ್ಯಾಯ ಕೊಡಿಸುವವರೆಗೂ ವಿರಮಿಸುವುದಿಲ್ಲ. ಚಂದ್ರಶೇಖರನ್ ಸಾವಿಗೆ ನ್ಯಾಯ ಕೊಡಿಸುತ್ತೇವೆ ಎಂದು ಪತ್ನಿಗೆ ಭರವಸೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಮತ್ತು ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದಲ್ಲಿ ಸಂಬಂಧಪಟ್ಟ ಸಚಿವರ ತಲೆದಂಡ ಆಗುವರೆಗೂ ಬಿಜೆಪಿ ಹೋರಾಡಲಿದೆ. ವಿಧಾನಸಭೆಯಲ್ಲೂ ಈ ಬಗ್ಗೆ ಧ್ವನಿ ಎತ್ತುತ್ತೇವೆ. ಸಿಐಡಿ ಅಧಿಕಾರಿಗಳು ಪೆನ್‌ಡ್ರೈವ್ ಪಡೆದುಕೊಂಡು ಹೋಗಿದ್ದು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರನ್ನು ಬಂಧಿಸುವಂತಾಗಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಯೂನಿಯನ್ ಬ್ಯಾಂಕ್‌ನವರು ಪ್ರಕರಣದ ಬಗ್ಗೆ ಸಿಬಿಐಗೆ ದೂರು ನೀಡಿದ್ದಾರೆ. ಒಂದು ಕೋಟಿ ರೂ. ಮೇಲ್ಪಟ್ಟು ಅವ್ಯವಹಾರ ಆದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ನಿಯಮವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗಾಗಿ ಪ್ರಕರಣ ಸಿಬಿಐಗೆ ಹೋಗಲಿದೆ ಎಂದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಿ.ಎಸ್.ಅರುಣ್, ಮುಖಂಡ ಮಂಗೋಟೆ ರುದ್ರೇಶ್ ಮತ್ತಿತರರು ಆರ್.ಅಶೋಕ್ ಅವರಿಗೆ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net