

ಮಂಡ್ಯ: ಮೋದಿ ಮತ್ತೊಮ್ಮೆ ಗೋಡೆ ಬರಹ ಅಭಿಯಾನಕ್ಕೆ ಶುಕ್ರವಾರ ನಗರದ ಬಿಜೆಪಿ ಕಚೇರಿ ಆವರಣದಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ 10 ವರ್ಷದಿಂದ ದೇಶದಲ್ಲಿ ಯಶಸ್ವಿ ಆಡಳಿತ ನೀಡಿದ್ದಾರೆ. ಅವರ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಜತೆಗೆ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ, ಆರ್ಥಿಕವಾಗಿ ಹಿಂದುಳಿದವರಿಗೆ ಸೇವಾ ಕಾರ್ಯವನ್ನು ಜಿಲ್ಲಾ ಘಟಕ ಮಾಡುತ್ತಿದೆ. ಶಿಕ್ಷಣ, ಕೃಷಿ, ಆರೋಗ್ಯ, ವಿದೇಶ ವ್ಯವಹಾರ, ರಕ್ಷಣೆ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಸರ್ಕಾರ ಸಾಧನೆ ಮಾಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಜನರಿಗಾಗಿ ಹಲವು ಯೋಜನೆಗಳನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಆರ್ಥಿಕ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯ ವಿಷಯದಲ್ಲಿ ಸಮಾಜದ ಎಲ್ಲಾ ವರ್ಗಗಳಿಗೂ ನೇರವಾಗಿ ಪ್ರಯೋಜನವಾಗಲು ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ತಲುಪಿಸಿದೆ ಎಂದರು.
ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ದೇಶದ ಅನ್ನದಾತರ ಹಿತಕ್ಕಾಗಿ ಕಿಸಾನ್ ಸಮ್ಮಾನ್ ಅತ್ಯಂತ ಮಹತ್ವದ ಯೋಜನೆಯಾಗಿದೆ. ರಾಜ್ಯದಲ್ಲಿ ಇದರ ಉಪಯೋಗವನ್ನು ಸುಮಾರು 52 ಲಕ್ಷ ರೈತರು ಪಡೆಯುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳ ಸಹಾಯಕ್ಕಾಗಿ ಸ್ವನಿಧಿ ಯೋಜನೆ, ಕಾಯಕ ಸಮಾಜದ ಏಳಿಗೆಗಾಗಿ ನೀಡುತ್ತಿರುವ ವಿಶ್ವಕರ್ಮ ಯೋಜನೆಯ ಆಧಾರ ರಹಿತ ಸಾಲ ನೀಡುವುದು ಜನಪರ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ನಗರಾಧ್ಯಕ್ಷ ವಿವೇಕ್, ಶಿವಕುಮಾರ್ ಆರಾಧ್ಯ, ಹರ್ಷ, ಭೀಮೇಶ್, ನಿತ್ಯಾನಂದ, ಶಿವಕುಮಾರ್ ಕೆಂಪಯ್ಯ, ವಸಂತ್‌ಕುಮಾರ್, ಜ್ಯೋತಿ ಕೃಷ್ಣೇಗೌಡ, ವೈರಮುಡಿ, ಸಿದ್ದರಾಜುಗೌಡ, ಪ್ರಸನ್ನ, ಚಂದ್ರು, ಕ್ರಾಂತಿ ಮಂಜು, ಆನಂದ್ ಇತರರಿದ್ದರು.