ಪಾಲಿಕೆಯಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಕದನ!

Screenshot_2023-10-25-22-55-04-71.jpg
Published on

ಮಹೇಶ್ ವಿಜಾಪುರ, ಬೆಳಗಾವಿ

ಬೂದಿ ಮುಚ್ಚಿದ ಕೆಂಡದಂತಿದ್ದ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಅಭಯ ಪಾಟೀಲ ಮಧ್ಯದ ರಾಜಕೀಯ ತಿಕ್ಕಾಟ ಈಗ ಬಹಿರಂಗ ಪಂಥ್ವಾಹನಕ್ಕೂ ಬಂದು ನಿಂತಿದ್ದು, ಮಹಾನಗರ ಪಾಲಿಕೆ ಅಂಗಳವೀಗ ಕಾಂಗ್ರೆಸ್ ವರ್ಸಸ್ ಬಿಜೆಪಿ ಕದನಭೂಮಿಯಾಗಿ ಮಾರ್ಪಟ್ಟಿದೆ. ರಾಜಕೀಯ ನಾಯಕರ ಕಿತ್ತಾಟದಿಂದ ಅಧಿಕಾರಿಗಳು ಹಾಗೂ ನಗರಸೇವಕರು ರೋಸಿ ಹೋಗುತ್ತಿದ್ದಾರೆ.

ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ ಪರಿಷ್ಕರಣೆ ಠರಾವು ಕಡತ ಕಾಣೆಯಾದ ವಿಷಯವಾಗಿ ಆಡಳಿತಾರೂಢ ಬಿಜೆಪಿ ಶಾಸಕ ಅಭಯ ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ ಸತೀಶ್ ಜಾರಕಿಹೊಳಿ ಮಧ್ಯೆ ಭುಗಿಲೆದ್ದಿರುವ ರಾಜಕೀಯ ಬೆಳವಣಿಗೆಗಳು ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ಅಂಗಳ ಪ್ರವೇಶಿಸಲಾರಂಭಿಸಿವೆ. ಇಬ್ಬರ ತಿಕ್ಕಾಟವು ಮೇಯರ್ ಶೋಭಾ ಸೋಮನಾಚೆ ಮತ್ತು ಪಾಲಿಕೆ ಆಯುಕ್ತ ಅಶೋಕ ದುಂಡಗುಂಟಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದರೆ, ಪಾಲಿಕೆ ಕ್ಷೇತ್ರವ್ಯಾಪ್ತಿ ಹಂಚಿಕೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತ್ರ ಮೌನ ತಾಳಿರುವುದು ಇನ್ನಷ್ಟು ಚರ್ಚೆಗೆ ಕಾರಣವಾಗುತ್ತಿದೆ. 

ಟಾರ್ಗೆಟ್ ಆಯುಕ್ತ : ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿ ಮಹಾನಗರ ಪಾಲಿಕೆ ಮೇಯರ್ ಅಂಕಿತದೊಂದಿಗೆ ರಾಜ್ಯ ಸರಕಾರಕ್ಕೆ ಹೋಗಬೇಕಿದ್ದ ಕಡತವೇ ಕಳ್ಳತನವಾಗಿರುವುದು ದಿನಕ್ಕೊಂದು ರಾಜಕೀಯ ಬೆಳವಣಿಗೆ ಹುಟ್ಟುಹಾಕುತ್ತಿದೆ. 2022-23 ಮತ್ತು 2023-24ರ ಸಾಲಿನ ತೆರಿಗೆ ಪರಿಷ್ಕರಣೆಗೆ ಠರಾವು ಕೈಗೊಂಡಿದ್ದರೂ ಮೇಯರ್ ಸಹಿ ಮಾಡಿದ ದಾಖಲೆಯಲ್ಲಿ 2024-25ರ ಸಾಲಿನ ತೆರಿಗೆ ಪರಿಷ್ಕರಣೆ ಅಂತ ನಮೂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ತಪ್ಪು ಮಾಹಿತಿ ದಾಖಲಿಸಿ ಪಾಲಿಕೆ ಆಯುಕ್ತ ಅಶೋಕ ದುಡಂಗುಂಟಿ ಆಡಳಿತ ಮಂಡಳಿ ದಿಕ್ಕು ತಪ್ಪಿಸುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದು ಕೇಂದ್ರ ಸರ್ಕಾರ ಅಧೀನದ ಯುಪಿಎಸ್ಸಿ, ಡಿಪಿಎಆರ್ ಮತ್ತು ಡಿಒಪಿಟಿ ವಿಭಾಗಗಳಿಗೆ ದೂರು ನೀಡಿದ್ದಾರೆ. 

ಮಹಾಪೌರರಿಗೂ ನೋಟಿಸ್:  ಪಾಲಿಕೆ ಆಡಳಿತ ಮಂಡಳಿ ಆಯುಕ್ತರ ವಿರುದ್ಧ ಕಾನೂನು ಕ್ರಮ ಜರುಗಿಸುವ ನಿರ್ಧಾರ ಕೈಗೊಳ್ಳುತ್ತಿದ್ದಂತೆ ‘ತೆರಿಗೆ ಪರಿಷ್ಕರಣೆ ಕಡತ ಕಳ್ಳತನವಾಗಿದೆ’ ಎಂದು ಪರಿಷತ್ ವಿಭಾಗದ ಅಧಿಕಾರಿಗಳ ವಿರುದ್ಧ ಪಾಲಿಕೆ ಆಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಕಾರಣದಿಂದ ಮೇಯರ್ ಸಹಿತ ಸಂಶಯಾಸ್ಪದ ಸದಸ್ಯರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ವಿಚಾರಣೆಯಲ್ಲಿ ದಾಖಲೆ ಕಳ್ಳತನದ ಸಂಶಯ ದಟ್ಟವಾದರೆ ಮೇಯರ್ ವಿರುದ್ಧವೂ ಎ್ಐಆರ್ ದಾಖಲಾಗುವುದು ಖಚಿತ ಎನ್ನುತ್ತಾರೆ ಸಚಿವ ಸತೀಶ್ ಜಾರಕಿಹೊಳಿ.

ಜಾತಿ-ಭಾಷೆ ಬಣ್ಣ: ಪ್ರಥಮ ಪ್ರಜೆ ಮೇಯರ್ ಮತ್ತು ಆಯುಕ್ತರ ಹುದ್ದೆಗಳು ಜಾತಿ, ಭಾಷೆ, ಪಕ್ಷಾತೀತವಾಗಿದ್ದರೂ ರಾಜಕೀಯ ಕಿತ್ತಾಟದಿಂದ ಎರಡೂ ಹುದ್ದೆಗಳಿಗೆ ಈಗ ಭಾಷೆ ಮತ್ತು ಜಾತಿ ಬಣ್ಣ ಬಳಿಯುವ ಪ್ರಯತ್ನಗಳು ಆರಂಭಗೊಂಡಿವೆ. ‘ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಹಸ್ತಕ್ಷೇಪ, ಒತ್ತಡದಿಂದ ಮಹಿಳೆಯಾದ ನನಗೆ ನಿರ್ಭಿತಿಯಿಂದ ಆಡಳಿತ ನಡೆಸಲಾಗುತ್ತಿಲ್ಲ. ಈ ಕುರಿತು ದೂರು ಸಲ್ಲಿಸಲು ಸಮಯಾವಕಾಶ ಬೇಕು’ ಎಂದು ಸ್ವತಃ ಮೇಯರ್ ಶೋಭಾ ಸೋಮನಾಚೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಇತ್ತ ‘ಹಿಂದುಳಿದ ವರ್ಗಕ್ಕೆ ಸೇರಿದ ಆಯುಕ್ತರನ್ನು ಬಿಜೆಪಿ ಶಾಸಕ ಅಭಯ ಪಾಟೀಲ ಬ್ಲಾೃಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಅಭಯ ಪಾಟೀಲ ಮನೆ ಮುಂದೆ ಧರಣಿ ನಡೆಸಲು ಕಾಂಗ್ರೆಸ್ ಸದಸ್ಯರು ಸಿದ್ಧತೆ ನಡೆಸಿದ್ದಾರೆ. 

ಬೇಸತ್ತ ನಗರಸೇವಕರು: 2019ರಲ್ಲಿ ನಡೆಯಬೇಕಿದ್ದ ಪಾಲಿಕೆ ಚುನಾವಣೆ ನಾನಾ ಕಾರಣಗಳಿಂದ ಮೂರು ವರ್ಷ ತಡವಾಗಿ 2022ರಲ್ಲಿ ಚುನಾವಣೆ ಕಂಡಿತ್ತು. ಪಕ್ಷದ ಚಿನ್ಹೆ ಮೇಲೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿತ್ತಾದರೂ ಫಲಿತಾಂಶ ಬಂದ ನಂತರವೂ ಒಂದು ವರ್ಷ ಕಾದು ಆಡಳಿತ  ಮಂಡಳಿ ರಚಿಸಿತ್ತು. ಈಗ ಪಾಲಿಕೆಯ ಎರಡನೇ ಸಾಮಾನ್ಯ ಸಭೆಯಲ್ಲಿಯೇ ವಿವಾದಗಳು ಭುಗಿಲೇಳಲಾರಂಬಿಸಿದ್ದರಿಂದ ಮೇಲ್ನೋಟಕ್ಕೆ ತಮ್ಮ ಪಕ್ಷಗಳನ್ನು ಸಮರ್ಥಿಸುವ ನಗರ ಸೇವಕರು ರಾಜಕೀಯ ಹಸ್ತಕ್ಷೇಪದಿಂದ ಬೇಸತ್ತಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಅಭಯ ಪಾಟೀಲ ಕಿತ್ತಾಟ ನಿಲ್ಲಿಸಲು ಮಧ್ಯವರ್ತಿಗಳ ಬೆನ್ನು ಬಿದ್ದಿದ್ದಾರೆ. 

ಜಾರಕಿಹೊಳಿ ಪ್ರತಿಕ್ರಿಯೆ:

ಮೇಯರ್ ಕಚೇರಿಯಲ್ಲಿರಬೇಕಾದ ದಾಖಲೆ ಕಾಣೆಯಾಗಿರುವುದರಿಂದ ಅಧಿಕಾರಿಗಳ ಸಹಿತ ಮೇಯರ್ ಮೇಲೆ ಎ್ಐಆರ್ ಮಾಡಲು ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಲಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಅಭಯ ಪಾಟೀಲ ಪ್ರತಿಕ್ರಿಯೆ: 

ಆಸ್ತಿ ತೆರಿಗೆ ಪರಿಷ್ಕರೆಣೆ  ಕುರಿತು ತಪ್ಪು ಮಾಹಿತಿ ನೀಡಿರುವ ಬಗ್ಗೆ ಸ್ವತಃ ಆಯುಕ್ತ ಒಪ್ಪಿಕೊಂಡಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸದಸ್ಯರು ಠರಾವು ಮಂಡಿಸಿದ್ದಾರೆ ಎಂದು ಶಾಸಕ ಅಭಯ ಪಾಟೀಲ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net