

ಬಳ್ಳಾರಿ : ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದೇವೆ. ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಮುನ್ನಡಿ ಬರೆದಿದೆ. ಕೊಟ್ಟಂತಹ ಐದು ಪ್ರಮುಖ ಆಶ್ವಾಸನೆಯನ್ನು ವಿಳಂಬ ಮಾಡದೆ ಜಾರಿಗೆ ತಂದಿರುವ ಕೀರ್ತಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನ ಪಾಲನೆ ಹಾಗೂ ವಚನ ಭ್ರಷ್ಟ ರಾಜಕಾರಣಿಗಳು ಇದ್ದಾರೆ. ವಚನ ಪಾಲನೆ ಮಾಡಿದ ಪಕ್ಷ ಕಾಂಗ್ರೆಸ್. ಬಿಜೆಪಿ ಕೊಟ್ಟಂತಹ ಆಶ್ವಾಸನೆ ಈಡೇರಿಸದೆ ವಚನ ಭ್ರಷ್ಟ ಪಕ್ಷವಾಗಿದೆ ಎಂದರು.
ಉದ್ಯೋಗ ಸೃಷ್ಟಿ, ಬೆಲೆ ನಿಯಂತ್ರಣ, ನಿರುದ್ಯೋಗ ಸಮಸ್ಯೆ, ಭ್ರಷ್ಟಾಚಾರ ನಿಯಂತ್ರಣ, ಕಪ್ಪು ಹಣ ವಾಪಸ್ ತರುವುದಾಗಿ ಬಿಜೆಪಿ ಹೇಳಿತ್ತು. ಆದರೆ ಯಾವುದನ್ನು ಅನುಷ್ಠಾನಕ್ಕೆ ತರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಕ್ಕಿ ವಿತರಣೆ ಮಾಡುವ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರು ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರಿಗೆ ರಾಜಕೀಯ ದಿವಾಳಿತನ ಕಾಡುತ್ತಿದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳದ ಪರಿಸ್ಥಿತಿ ಬಂದಿದೆ. ರಾಷ್ಟ್ರೀಯ ಪಕ್ಷ ಈ ರೀತಿ ನಾಯಕತ್ವದ ಕೊರತೆ ಕಾಡುತ್ತಿದೆ. ಎಲ್ಲರೀತಿಯಲ್ಲಿ ವಿಫಲರಾಗಿದ್ದಾರೆ. ಪ್ರಧಾನಿ ಮೋದಿ ಕೂಡ ಹತಾಶೆ ಆಗಿದ್ದಾರೆ. ಬಿಜೆಪಿ ಮತ್ತು ಮಿತ್ರ ಪಕ್ಷಗಳನ್ನು ತಿರಸ್ಕಾರ ಮಾಡುತ್ತಾರೆ ಎನ್ನುವ ಭಯ ಕಾಡುತ್ತಿದೆ. ವಿರೋಧ ಪಕ್ಷಗಳು ಸಂಘಟಿತರಾಗಿರುವುದು ಸಹಿಸಿಕೊಳ್ಳಲಾಗುತ್ತಿಲ್ಲ. ದೇಶದಲ್ಲಿ ಬಿಜೆಪಿಗರು ಸಾಮರಸ್ಯ ಹಾಳು ಮಾಡಿದ್ದಾರೆ. ದೇಶದ ಜನರಿಗೆ ಸುರಕ್ಷತೆ ಇಲ್ಲದಂತೆ ಕಾಡುತ್ತಿದೆ. ಮಣಿಪುರದಲ್ಲಿ ನಡೆಯುತ್ತಿರುವ ಘಟನೆಗಳು ಖಂಡನೀಯ. ಅಲ್ಲಿನ ಸರ್ಕಾರ ಅಧಿಕಾರ ಬಿಟ್ಟು ತೊಲಗಬೇಕಿದೆ ಎಂದರು. ಆಧುನಿಕ ಮೌನಿ ಬಾಬಾ, ಶೋಕಿಲಾಲ ಮೋದಿ ಅವರು ದೇಶದ ಜನರ ರಕ್ಷಣೆಯಲ್ಲಿ ವಿಫಲರಾಗಿದ್ದಾರೆ. ಅಲ್ಲಿನ ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹ ಕೊರತೆ ಸರಿದೂಗಿಸಲು ಕ್ರಮ ಕೈಕೊಳ್ಳಬೇಕು. ತುಂಗಭದ್ರಾ ಬೋರ್ಡ್‌ನಲ್ಲಿ ಮೂರು ರಾಜ್ಯದ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದಾರೆ. ಬೋರ್ಡ್ ಸರಿಯಾಗಿ ಕ್ರಮ ಕೈಗೊಳ್ಳಬೇಕು. 200ಕ್ಕೂ ಹೆಚ್ಚು ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಕೂಡಲೇ ಬೋರ್ಡ್ ಜೀವಂತವಾಗಿದ್ದರೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಕೇಂದ್ರ ಸರ್ಕಾರವೂ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಬೇಕು ಎಂದರು. ಮುಖಂಡರಾದ ಸುನೀಲ್ ರಾವೂರು, ಲೋಕೇಶ್, ವೆಂಕಟೇಶ್ ಹೆಗಡೆ ಸುದ್ದಿಗೋಷ್ಠಿಯಲ್ಲಿ ಇದ್ದರು.