ಸಂಡೂರಿನಲ್ಲಿ ಬಿಜೆಪಿ ಮತ ಪ್ರಮಾಣ ಹೆಚ್ಚಳ

Published on

ಬಳ್ಳಾರಿ : ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹಲವು ಚುನಾವಣೆಗಳಲ್ಲಿ ನಿರಂತರವಾಗಿ ಗೆಲ್ಲುತ್ತಿದ್ದು ಒಂದಡೆಯಾದರೆ ಮತ ಪ್ರಮಾಣ ಕುಸಿಯುತ್ತಿದೆ. ಇತ್ತ ಬಿಜೆಪಿ ಮತ ಪ್ರಮಾಣ ಎಚ್ಚೇತ್ತರುವುದು ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆಯಾಗಲಿದೆ.

ಈ ಉಪ ಚುನಾವಣೆಯಲ್ಲಿ ಸಚಿವ ಸಂತೋಷ ಲಾಡ್, ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರದ ನಡುವೆಯೂ ಬಿಜೆಪಿ ಅಭ್ಯರ್ಥಿ 80 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಬಲವಾಗಿ ಪೈಪೋಟಿ ‌ನೀಡಿದ್ದಾರೆ. ಆದರೆ, ಈವರೆಗೆ ಸತತವಾಗಿ ಗೆಲ್ಲುತ್ತಿರುವ ಕಾಂಗ್ರೆಸ್ ಪಕ್ಷ ಪ್ರತಿ ಚುನಾವಣೆಯಲ್ಲಿ ಮತ ಪ್ರಮಾಣಗಳು ಕುಸಿಯುತ್ತಿರುವುದು ಗಮನಾರ್ಹವಾಗಿದೆ. ಕ್ಷೇತ್ರದಲ್ಲಿ ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸೇರಿ ಹದಿನೈದು ಬಾರಿ ಗೆದ್ದಿರುವ ಕಾಂಗ್ರೆಸ್ ಪಕ್ಷಕ್ಕೆ ಗಣನೀಯ ಮಟ್ಟದಲ್ಲಿ ಮತ ಪ್ರಮಾಣದ ಬಗ್ಗೆ ಎಚ್ಚೇತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಗೆ ಬಿಜೆಪಿ ಪೆಟ್ಟು ನೀಡಲಿದೆ ಎಂಬು ಮಾತು‌ ಕೇಳಿ ಬರುತ್ತಿದೆ.

ಕಾಂಗ್ರೆಸ್ ಮತ ಪ್ರಮಾಣ ಕುಸಿತ : 2004 ರಲ್ಲಿ ಸಂಡೂರು ಕ್ಷೇತ್ರದಲ್ಲಿ ಮೊದಲ ಬಾರಿಗೆ ಜೆಡಿಎಸ್ ಪಕ್ಷದಿಂದ ಸಂತೋಷ ‌ಲಾಡ್ ಗೆದ್ದರು. ಬಳಿಕ‌ ಕ್ಷೇತ್ರ ಮರು ವಿಂಗಡಣೆಯಾದ ಬಳಿಕ ಎಸ್ಟಿ ಮೀಸಲು ಕ್ಷೇತ್ರಯಾಗಿದ್ದರಿಂದ ಲಾಡ್ ಅಪ್ತ ಈ.ತುಕಾರಾಮ್ ಗೆ ಮೊದಲ ಬಾರಿಗೆ ಅವಕಾಶ ನೀಡಲಾಯಿತು. 2008 ರಿಂದ 2023ರವರೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಲಾಡ್ ಬೆಂಬಲಿಗ ಎಂಬ ಕಾರಣದಿಂದ ತುಕಾರಾಮ್ ಸತತವಾಗಿ ಗೆಲ್ಲುತ್ತಿದ್ದಾರೆ. ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ತುಕಾರಾಮ್ ಆಯ್ಕೆಯಾದ ಬಳಿಕ ತೆರವಾದ ಶಾಸಕ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಸ್ಥಳಿಯ ಕಾರ್ಯಕರ್ತರಿಗೆ ಟಿಕೆಟ್ ಎಂಬುದಾಗಿ ಕಾರ್ಯಕರ್ತರ ಕೂಗು ಆಗಿತ್ತು. ಇದರಿಂದ ನೇರವಾಗಿ ಲಾಡ್ ಬಳಿಯೇ ಕುಟುಂಬ ರಾಜಕಾರಣಕ್ಕೆ ಟಿಕೆಟ್ ಬೇಡ ಎಂಬುದಾಗಿ ಕಾರ್ಯಕರ್ತರು ವಿರೋಧಿಸಿದ್ದರು. ಅಲ್ಲದೆ, ಕಳೆದ ಹಲವು ವರ್ಷಗಳೇ ಶಾಸಕರಾಗಿರುವ ತುಕಾರಾಮ್ ಅವರಿಗೆ ಆಡಳಿತ ವಿರೋಧಿ ಅಲೆ ಕೂಡ ಎದ್ದಿದ್ದೆ. ಈ ಚುನಾವಣೆಯಲ್ಲಿ ಈ ಬಾರಿ ಪಟ್ಟಣದಲ್ಲಿಯೇ ಮತಗಳು ಕಡಿಮೆ ಚಲಾವಣೆಯಾಗಿವೆ. ಮುಂಬರುವ ದಿನಗಳಲ್ಲಿ ಇದೇ ರೀತಿ ಆಡಳಿತ ವಿರೋಧಿ ಅಲೆ ಎದ್ದರೆ ಕಾಂಗ್ರೆಸ್ ಗೆಲುವು ಕಷ್ಟವಾಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಬಿಜೆಪಿ ಖಾತೆ ತೆರೆಯಲು ಉತ್ಸುಕ : ರಾಜ್ಯದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗದ ಕ್ಷೇತ್ರಗಳಲ್ಲಿ ‌ಒಂದಾದ ಸಂಡೂರಿನಲ್ಲಿ ಕಳೆದ ಹಲವು ವರ್ಷಗಳಿಂದ ಪೈಪೋಟಿ ‌ನೀಡಿ‌ ಪರಾಜಿತಗೊಳ್ಳುತ್ತಿದೆ. ಕಳೆದ 2023 ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸೆಡ್ಡು ಹೊಡೆದು ಆರ್ ಪಿಪಿ ಯಿಂದ ದಿವಾಕರ್ ಸ್ಪರ್ಧೆಯಿಂದ ಮತಗಳ ವಿಭಜನೆಯಾಗಿ ಬಿಜೆಪಿ ಪರಾಭವಗೊಂಡಿತು. ಕಳೆದ ಬಾರಿಗಿಂತ ಈ ಬಾರಿ ತೀವ್ರ ಪೈಪೋಟಿ ‌ನೀಡಿದ್ದ ಬಿಜೆಪಿ ಯು ಕೆಲ ಸುತ್ತಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿಯ ಹೊಸ ಅಧ್ಯಾಯವೇ ಈ ಚುನಾವಣೆಯಲ್ಲಿ ಶುರುವಾಗುತ್ತಿತ್ತು. ಆದರೆ, ರಾಜಮನೆತನದ ಕೆ.ಘೋರ್ಪಡೆ ಬಂಡಾಯ, ರೆಡ್ಡಿಯನ್ನು ಬೆಂಬಲಿಸದ ಗಣಿ ಮಾಲೀಕರು ಸೇರಿದಂತೆ ಇತರೆ ಸವಾಲುಗಳಿಂದ ಬಿಜೆಪಿಗೆ‌ ಸೋಲಾಯಿತು. ಮುಂದಿನ ದಿನಗಳಲ್ಲಿ ಈ ಸವಾಲು ಮೆಟ್ಟಿ‌ ನಿಂತರೆ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಲಿದೆ.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net