

ಮಂಗಳೂರು: ಭಾರತದ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಬಹುಮತಗಳಿಂದ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿರುವ ಪಕ್ಷದ ಜಿಲ್ಲಾ ಕಚೇರಿ ಮುಂಭಾಗ ಶುಕ್ರವಾರ ಬಿಜೆಪಿ ಕಾರ್ಯಕರ್ತರು, ಜನಪ್ರತಿನಿಧಿಗಳು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಡಿ.ವೇದವ್ಯಾಸ ಕಾಮತ್, ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ದೇಶದ ರಾಷ್ಟ್ರಪತಿ ಹುದ್ದೆ ಅಲಂಕರಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಇದು ಪ್ರಜಾಪ್ರಭುತ್ವದ ಯಶಸ್ವಿ ದಿನ ಎಂದರು.
ದ್ರೌಪದಿ ಮುರ್ಮು ಅವರು ಅತ್ಯಧಿಕ ಮತಗಳನ್ನು ಪಡೆಯುವಲ್ಲಿ ಮಿತ್ರ ಪಕ್ಷಗಳು ಸಹಕಾರ ನೀಡಿವೆ. ಹೆಚ್ಚಿನ ಮತಗಳು ಎನ್‌ಡಿಎ ಅಭ್ಯರ್ಥಿಗೆ ಬಿದ್ದಿರುವುದಿಂದ ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳಿಗೆ ಮುಖಭಂಗವಾಗಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದಿರೆ ಮಾತನಾಡಿ, ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಈ ಕಾಲಘಟ್ಟದಲ್ಲಿ ಅತೀ ಕಿರಿಯ ರಾಷ್ಟ್ರಪತಿಯಾಗಿ ಬುಡಕಟ್ಟು ಸಮುದಾಯದ, ಸಾಮಾನ್ಯ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಮಾಡುವುದರ ಮೂಲಕ ಇಡೀ ದೇಶದ ಮಾತೃ ಶಕ್ತಿಗೆ ಗೌರವ ತಂದುಕೊಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಸಾಮಾಜಿಕವಾಗಿ ಬದಲಾವಣೆ ತರುವ ನಿಟ್ಟಿನಲ್ಲಿ ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಮುರ್ಮು ಅವರನ್ನು ಅರ್ಹವಾಗಿಯೇ ರಾಷ್ಟ್ರಪತಿಯಾಗಿ ಮಾಡಲಾಗಿದೆ. ನಿರೀಕ್ಷೆಗೂ ಮೀರಿದ ಬೆಂಬಲ ದೊರಕಿದ್ದು, ಇತಿಹಾಸ ನಿರ್ಮಾಣವಾಗಿದೆ. ಪ್ರತಿ ರಾಜ್ಯದಿಂದಲೂ ಬೆಂಬಲ ವ್ಯಕ್ತವಾಗಿದೆ. ಶೇ.64ರಷ್ಟು ಮತಗಳು ಸಿಕ್ಕಿರುವುದೇ ಇದಕ್ಕೆ ಸಾಕ್ಷಿ ಎಂದರು.
ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರು, ಬಿಜೆಪಿ ರಾಜ್ಯ ನಾಯಕ ವಿಕಾಸ್ ಪುತ್ತೂರು, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಕೆಎ್ಡಿಸಿ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ನಗರ ದಕ್ಷಿಣ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಪ್ರಮುಖರಾದ ರೂಪಾ ಡಿ ಬಂಗೇರಾ, ಶಕಿಲಾ ಕಾವಾ ಸೇರಿದಂತೆ ಕಾರ್ಪೋರೇಟರ್‌ಗಳು, ಮಹಿಳಾ ಮೋರ್ಚಾ ಪದಾಧಿಕಾರಿಗಳು ಭಾಗವಹಿಸಿದ್ದರು.