

ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆ ನಗರಕ್ಕೆ ಆಗಮಿಸಿದಾಗ ಮುಖಂಡರು, ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು.
ಬನ್ನೂರು ರಸ್ತೆಯಲ್ಲಿರುವ ಕನ್ನಿಕಾ ದೇವಸ್ಥಾನದ ಬಳಿ ಗೋಪೂಜೆ ಮಾಡುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು. ನೂರಾರು ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದರೆ, ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸಿದ್ದರು.
ಬೆಳ್ಳಿ ರಥದಲ್ಲಿರಿಸಿದ್ದ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ನೂರಡಿ ರಸ್ತೆ, ಕರ್ನಾಟಕ ಬಾರ್ ವೃತ್ತ, ಹೊಸಹಳ್ಳಿ ವೃತ್ತ, ವಿಶ್ವೇಶ್ವರಯ್ಯ ರಸ್ತೆ ಮಾರ್ಗವಾಗಿ ಮಹಾವೀರ ವೃತ್ತಕ್ಕೆ ಆಗಮಿಸಿ ಅಂತ್ಯಗೊಳಿಸಲಾಯಿತು. ಇದಕ್ಕೂ ಮುನ್ನ ಮಾರ್ಗ ಮಧ್ಯೆ ರಥಕ್ಕೆ ಪುಷ್ಪವೃಷ್ಠಿ ಸುರಿಸಲಾಯಿತು. ದಾರಿಯುದ್ದಕ್ಕೂ ಘೋಷಣೆಗಳು ಮೊಳಗಿದವು. ಡೊಳ್ಳು ಕುಣಿತ, ನಗಾರಿ ಸೇರಿದಂತೆ ಜಾನಪದ ಕಲಾತಂಡಗಳು ಯಾತ್ರೆಗೆ ಸಾಥ್ ನೀಡಿದವು. ಮಧ್ಯಾಹ್ನದ ಬಳಿಕ ಪಾಂಡವಪುರ ತಾಲೂಕಿಗೆ ಯಾತ್ರೆ ತೆರಳಿತು.
ಕೇಂದ್ರ ಸಚಿವ ಕ್ರಿಷನ್‌ಪಾಲ್ ಗುರ್ಜರ್, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಸಚಿವ ಅಂಗಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನಾ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ, ಕೊಳ್ಳೆಗಾಲದ ಶಾಸಕ ಎನ್.ಮಹೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಚಂದಗಾಲು ಶಿವಣ್ಣ, ವಿದ್ಯಾನಾಗೇಂದ್ರ ಇತರರಿದ್ದರು.