ಬುರುಡೆ ಬಿಡುವರಿಗೆ ಜನ ಪಾಠ ಕಲಿಸುತ್ತಾರೆ: ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

mlv
Published on

ಮಳವಳ್ಳಿ: ಬುರುಡೆ, ಬೊಗಳೆ ಬಿಟ್ಟುಕೊಂಡು ಓಡಾಡುತ್ತಿರುವ ನಾಯಕರಿಗೆ ಜನರೇ ಬುದ್ಧಿ ಕಲಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಪಟ್ಟಣದ ಅನಂತ್‌ರಾಮ್ ವೃತ್ತದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿ, 2018ರಲ್ಲಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ, ತಿ.ನರಸೀಪುರದಲ್ಲಿ ಮಹದೇವಪ್ಪಗೆ ಜನರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ನಾನು ಮೈಸೂರಿನಲ್ಲಿ ಗೆದ್ದಿದ್ದೇನೆ. ಬೆಂಗಳೂರು- ಮೈಸೂರು ಹೆದ್ದಾರಿ ಬಗ್ಗೆ ನಾನು ಬುರುಡೆ ಬಿಟ್ಟಿಲ್ಲ. ಈ ಆರೋಪ ಮಾಡಿದವರಿಗೆ ಮೈಸೂರಿನ ಜನ ಪಾಠ ಕಲಿಸುತ್ತಾರೆ ಎಂದರು.

ನ್ಯಾಷನಲ್ ಹೈವೇ ಯಾವ ರೀತಿ ಆಗುತ್ತೆ ಎನ್ನುವ ಕನಿಷ್ಠ ಜ್ಞಾನ ಸಿದ್ದರಾಮಯ್ಯ ಹಾಗೂ ಮಹದೇವಪ್ಪಗೆ ಇಲ್ಲ. ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭ ಹಳೇ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲವೆಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಕ್ಷೇತ್ರದ ಪ್ರತಿ ಬೂತ್‌ನಲ್ಲೂ ಕಮಲ ಅರಳಿಸುವ ಕೆಲಸವನ್ನು ಜನರೇ ಮಾಡಬೇಕು. ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಮಾಡಿದ್ದು ಬಿಜೆಪಿ. ಮಳವಳ್ಳಿಯಲ್ಲಿ ಉರೀಗೌಡ, ನಂಜೇಗೌಡ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಇತಿಹಾಸವನ್ನೇ ಮರು ಸ್ಥಾಪನೆ ಮಾಡುತ್ತೇವೆ. ಕುಟುಂಬದ ಅಭಿವೃದ್ಧಿಯನ್ನೇ ದೇಶದ ಅಭಿವೃದ್ಧಿ ಎಂದು ನಾಟಕವಾಡುವ ಜನತಾದಳಕ್ಕೆ ಇಲ್ಲಿ ಮತ ದೊರಕುವುದಿಲ್ಲ. ಮಳವಳ್ಳಿಯಲ್ಲಿ ಮತದಾರರು ಕಮಲ ಅರಳಿಸಬೇಕು ಎಂದು ಮನವಿ ಮಾಡಿದರು.

ಕೇಸರಿಮಯ: ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದ ಪ್ರಮುಖ ರಸ್ತೆಗಳು ಸಂಪೂರ್ಣ ಕೇಸರಿಮಯವಾಗಿತ್ತು. ಬಿಜೆಪಿ ನಾಯಕರಿಗೆ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತ ನೀಡಲಾಯಿತು. ಮಹಿಳಾ ಕಾರ್ಯಕರ್ತರು ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದರು.

ಕೇಂದ್ರ ಸಚಿವ ಕ್ರಿಷನ್ ಪಾಲ್ ಗುರ್ಜರ್, ಸಚಿವ ಗೋಪಾಲಯ್ಯ, ಮಾಜಿ ಸಚಿವ ಬಿ.ಸೋಮಶೇಖರ್, ಜಿ. ಮುನಿರಾಜು, ವೈಸ್ ಸಿದ್ದರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net