

ಮಂಡ್ಯ: ಒಳ ಮೀಸಲಾತಿ ಸಂಬಅಧ ಅಲೆಮಾರಿ ಸೇರಿದಂತೆ ಅತಿ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಿದೆ. ಕೂಡಲೇ ಮೀಸಲಾತಿಗೆ ತಿದ್ದುಪಡಿ ತಂದು ಸರಿಪಡಿಸಲು ರಾಜ್ಯಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಆಗ್ರಹಿಸಿದರು.
ವಿಧಾನಸಭೆಯ ಅಧಿವೇಶನ ಮುಗಿಯುವ ಕೊನೆ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಸಮುದಾಯದ ಒಳ ಮೀಸಲಾತಿಗೆ ತಾರ್ಕಿಕ ಮತ್ತು ತಾತ್ವಿಕ ಅಂತ್ಯ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಆ.25ರಂದು ಆದೇಶ ಹೊರಡಿಸಿದ್ದು, ಆದೇಶದಲ್ಲಿ ಯಾವುದೇ ತಾರ್ಕಿಕ ಮತ್ತು ತಾತ್ವಿಕ ಅಂಶಗಳು ಕಾಣುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಒಳ ಮೀಸಲಾತಿ ಸಂಬಂಧ ನಾಗಮೋಹನ್‌ದಾಸ್ ಅವರು 5 ವರ್ಗವನ್ನಾಗಿ ವಿಂಗಡಿಸಿದ್ದು, ಎ ವರ್ಗದಲ್ಲಿ ಅತಿ ಹಿಂದುಳಿದ ಪರಿಶಿಷ್ಟ ಸಮುದಾಯದ 5,22,099 ಜನಸಂಖ್ಯೆಯ 59 ಜಾತಿಗಳಿಗೆ ಶೇ.1ರಷ್ಟು, ಬಿ ವರ್ಗದಲ್ಲಿ ಹೆಚ್ಚು ಹಿಂದುಳಿದ ಪರಿಶಿಷ್ಟ ಸಮುದಾಯದ 36,69,246 ಜನಸಂಖ್ಯೆಯ 18 ಜಾತಿಗಳಿಗೆ ಶೇ.6ರಷ್ಟು, ಸಿ ವರ್ಗದಲ್ಲಿ ಹಿಂದುಳಿದ ಪರಿಶಿಷ್ಟ ಸಮುದಾಯದ 30,08,633 ಜನಸಂಖ್ಯೆಯ 17 ಜಾತಿಗಳಿಗೆ ಶೇ.5ರಷ್ಟು, ಡಿ ವರ್ಗದಲ್ಲಿ ಕಡಿಮೆ ಹಿಂದುಳಿದ ಪರಿಶಿಷ್ಟ ಸಮುದಾಯದ 28,24,939 ಜನಸಂಖ್ಯೆಯ 4 ಜಾತಿಗೆ ಶೇ.4ರಷ್ಟು ಹಾಗೂ ಇ ವರ್ಗದಲ್ಲಿ 4,74,954 ಜನಸಂಖ್ಯೆಯ ಮೂಲ ಜಾತಿಯ ಹೆಸರು ನಮೂದಿಸದ (ಎಕೆ, ಎಡಿ, ಎಎ) ಜಾತಿಗಳಿಗೆ ಶೇ.2ರಷ್ಟು ಮೀಸಲಾತಿ ಶಿಫಾರಸು ಮಾಡಿದ್ದಾರೆ ಎಂದು ಹೇಳಿದರು.
ಅಲೆಮಾರಿ ಹಾಗೂ ಅರೆ ಅಲೆಮಾರಿ, ಅಸಹಾಯ ಮತ್ತು ದುರ್ಬಲ ಸಮುದಾಯಗಳನ್ನು ವಿಂಗಡಿಸಿರುವ ನಾಗಮೋಹನ್‌ದಾಸ್ ವರದಿಯಲ್ಲಿ ಶೇ.1ರಷ್ಟು ಮೀಸಲಾತಿ ನೀಡಿದ್ದರೂ ಇತರೆ ಪ್ರಬಲ ವರ್ಗಗಳನ್ನು ಸೇರಿಸಿದ ರಾಜ್ಯ ಸರ್ಕಾರ ಮಹಾಮೋಸ ಎಸಗಿದೆ. ಇದು ತಾತ್ವಕ ಮತ್ತು ತಾರ್ಕಿಕ ಎಂಬುದು ಸರಿಯೇ ಎಂದು ಪ್ರಶ್ನಿಸಿದ ಅವರು, ನಾಗಮೋಹನ್‌ದಾಸ್ ವರದಿಯ ಶಿಫಾರಸಿ ತಿದ್ದುಪಡಿ ಮಾಡಿಕೊಂಡ ಕಾಂಗ್ರೆಸ್ ಸರ್ಕಾರ ಮೂರು ವರ್ಗಗಳನ್ನಾಗಿ ವಿಂಗಡಿಸಿಕೊಂಡಿದೆ. ಶೇ.6, 6 ಮತ್ತು 5 ರಷ್ಟು ಮೀಸಲಾತಿ ವಿಂಗಡಿಸಿ, 101 ಜಾತಿಗಳ ಪೈಕಿ 98 ಜಾತಿಗಳನ್ನು ಮಾತ್ರ ತೋರಿಸಿದ್ದು, ಕಾನೂನು ಬದ್ಧ ಪರಿಶೀಲನೆಯಲ್ಲಿ ಸಮಸ್ಯೆ ಎದುರಾಗುತ್ತದೆ. ಅನುಚ್ಛೇದ 192ರ ಪ್ರಕಾರ ಜಾತಿಗಳನ್ನು ಸೇರಿಸಲು ಅಥವಾ ತೆಗೆಯಲು ಕೇಂದ್ರ ಸರ್ಕಾರಕ್ಕೆ ಹೊರತುಪಡಿಸಿ ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ. ಈ ಸಂಬಂಧ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೆ, ಈ ಮೀಸಲಾತಿಗೆ ನ್ಯಾಯಾಲಯ ತಡೆ ನೀಡಲು ಇದೊಂದು ಕಾರಣ ಸಾಕಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ತಮ್ಮ ಆದೇಶಕ್ಕೆ ತಿದ್ದುಪಡಿ ತರಬೇಕು. ಇಲ್ಲವಾದಲ್ಲಿ ತಮ್ಮ ಆದೇಶ ಉರ್ಜಿತವಾಗಬಾರದೆಂದು ತಾವೇ ಬೇಕೆಂತಲೇ ಆದೇಶ ಮಾಡಿದಂತಾಗುತ್ತದೆ. ರಾಜ್ಯ ಸರ್ಕಾರ ತನ್ನ ಹಣಕಾಸಿನ ಮುಗ್ಗಟ್ಟಿನಿಂದ ಮೀಸಲಾತಿ ಜಾರಿಯಾಗದಂತೆ ತಡೆಯಲೆಂದೇ ಒಳಮೀಸಲಾತಿ ಆದೇಶ ಮಾಡಿದಂತೆ ಕಾಣುತ್ತಿದೆ ಎಂದು ಆರೋಪ ಮಾಡಿದರು.
ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಪರಮಾನಂದ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ವಕ್ತಾರ ನಾಗಾನಂದ ಇದ್ದರು.