

ಮೈಸೂರು: ಬಿಜೆಪಿಗೆ ಹೊಟ್ಟೆ ಕಿಚ್ಚು. ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಅಪಪ್ರಚಾರ, ಸುಳ್ಳು ಹೇಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.
ಗ್ಯಾರಂಟಿ ಯೋಜನೆ ಕುರಿತು ಅವಹೇಳನ ಮಾಡಿದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ‘ಈ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿ ಆಗಲಿದೆ’ ಎಂದು ಹೇಳಿದ್ದರು. ಜತೆಗೆ, ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜೇಯಂದ್ರ ಸೇರಿದಂತೆ ಬಿಜೆಪಿ ಅನೇಕರು ಟೀಕೆ ಮಾಡಿದ್ದರು. ‘ಅಭಿವೃದ್ಧಿ ಕೆಲಸಗಳಾಗಲ್ಲ. ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳೂ ಸ್ಥಗಿತವಾಗಲಿವೆ’ ಎಂದೂ ಹೇಳಿದ್ದರು. ಆದರೆ, ಇದೆಲ್ಲ ಅಪ್ಪಟ ಸುಳ್ಳು ಎಂದು ಹೇಳಿದರು.
ಗ್ಯಾರಂಟಿಯಂತಹ ಕಾರ್ಯಕ್ರಮಗಳನ್ನು ಬಿಜೆಪಿ ಮಾಡಿದ್ದಾರೆಯೇ? ಇಲ್ಲ. ಬದಲಿಗೆ ಬಡವರಿಗೆ ಕೊಡುವ ಅಕ್ಕಿಗೂ ಕಲ್ಲು ಹಾಕಿದರು. ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಮೊದಲು ಒಪ್ಪಿ, ನಂತರ ಕೊಡಲಿಲ್ಲ ಎಂದು ಹರಿಹಾಯ್ದರು.
ಶ್ರೀಮಂತರಷ್ಟೇ ಸಂಪತ್ತಿನ ಮಾಲೀಕರಲ್ಲ. ಬಡವರು ಸಹ ಮಾಲೀಕರು. ಅದಕ್ಕಾಗಿ ಸಂಪತ್ತಿನ ಸಮಾನ ಹಂಚಿಕೆಗಾಗಿ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿದೆ. ಎಲ್ಲ ಧರ್ಮ, ಜಾತಿಗಳ ಬಡವರು ಲಾಭ ಪಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ತಿವಿದರು.
ಸಂವಿಧಾನದ ಕುರಿತು ಬಿಜೆಪಿಗೆ ಗೌರವ ಇಲ್ಲ. ಆ ಪಕ್ಷದ ಸಂಸದ ಅನಂತಕುಮಾರ್ ಹೆಗಡೆ 2ನೇ ಬಾರಿಗೆ ಸಂವಿಧಾನ ಬದಲಾವಣೆ ಮಾಡುವ ಕುರಿತು ಹೇಳಿಕೆ ಕೊಟ್ಟಿದ್ದಾರೆ. ನರೇಂದ್ರ ಮೋದಿ, ಅಮಿತ್ ಷಾ ಅವರು ಇವರ ಮೂಲಕ ಹೇಳಿಸಿದ್ದಾರೆ. ಹೀಗಾಗಿಯೇ ಹೆಗಡೆ ವಿರುದ್ಧ ಕ್ರಮ ಕೈಗೊಂಡಿಲ್ಲ. ಪಕ್ಷದಿಂದಲೂ ಉಚ್ಚಾಟಿಸಿಲ್ಲ. ಏಕೆಂದರೆ, ಇದುವೇ ಬಿಜೆಪಿ ರಹಸ್ಯ ಕಾರ್ಯಸೂಚಿ. ಅದರ ಅಚಲ ನಿಲುವು ಎಂದು ವಾಗ್ದಾಳಿ ನಡೆಸಿದರು.
ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ಕೆ.ಹರೀಶ್ ಗೌಡ, ಡಿ.ರವಿಶಂಕರ್, ಎ.ಆರ್. ಕೃಷ್ಣಮೂರ್ತಿ, ಎಂಎಲ್‌ಸಿಗಳಾದ ಮರಿತಿಬ್ಬೇಗೌಡ, ಡಾ.ಡಿ.ತಿಮ್ಮಯ್ಯ ಇನ್ನಿತರರಿದ್ದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಐದು ವರ್ಷಗಳೂ ಮುಂದುವರಿಯುವುದು ಗ್ಯಾರಂಟಿ. ಇದರಲ್ಲಿ ಒಂದೇ ಒಂದು ಯೋಜನೆ ಸಹ ಸ್ಥಗಿತವಾಗಲ್ಲ. ಯಾವುದೇ ರೀತಿಯ ಸಂಶಯವೇ ಬೇಡ.
-ಮುಖ್ಯಮಂತ್ರಿ ಸಿದ್ದರಾಮಯ್ಯ