ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಕರೆ

udp-11-bjp
Published on

ಉಡುಪಿ: ಲೋಕಸಭಾ ಚುನಾವಣೆಗೆ ಪಕ್ಷವನ್ನು ಮತ್ತು ಕಾರ್ಯಕರ್ತರನ್ನು ಸಜ್ಜುಗೊಳಿಸುವ ಪ್ರಕ್ರಿಯೆ ದೇಶದಾದ್ಯಂತ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಪಕ್ಷ ನೀಡಿರುವ ಪ್ರಮುಖ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವ ಮೂಲಕ ಬಿಜೆಪಿ ಅತ್ಯಂತ ಹೆಚ್ಚಿನ ಅಂತರದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲುವಂತೆ ಮಾಡಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್​ ಹೇಳಿದರು.

ಶುಕ್ರವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದ ಅಭಿವೃದ್ಧಿಯ ಚಿಂತನೆ ಇಲ್ಲದ ವಿಪಕ್ಷಗಳು ಕೇಂದ್ರದಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರಲೇಬಾರದೆಂಬ ಒಂದೇ ಅಜೆಂಡಾವನ್ನು ಇಟ್ಟುಕೊಂಡು ಹತಾಶೆಯ ಹೋರಾಟವನ್ನು ನಡೆಸುತ್ತಿವೆ. ಪ್ರತಿಪಕ್ಷಗಳ ಈ ನಡೆಯನ್ನು ಬಿಜೆಪಿ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ, ತಮ್ಮ ಬೂತ್​, ಶಕ್ತಿಕೇಂದ್ರ, ಮಹಾ ಶಕ್ತಿಕೇಂದ್ರ, ಮಂಡಲ ಮತ್ತು ಜಿಲ್ಲಾ ಮಟ್ಟದಲ್ಲಿ ಯಾವ ರೀತಿಯ ಸಂಘಟನಾತ್ಮಕ ಕ್ರಮಗಳನ್ನು ಕೈಗೊಂಡು ಪಕ್ಷವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಬಹುದು ಎಂದರು.

ಆ.14ರಂದು ದೇಶ ವಿಭಜನೆ ಕ್ಷಣವನ್ನು ಸ್ಮರಿಸಿಕೊಂಡು ಅದಕ್ಕಾಗಿ ಪ್ರಾಣತೆತ್ತವರನ್ನು ನೆನೆಯುವ ನಿಟ್ಟಿನಲ್ಲಿ ದೇಶ ವಿಭಜನಾ ಕರಾಳ ದಿನ ಅಚರಿಸಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯನ್ನು ಅತ್ಯಂತ ನಾಜೂಕಾಗಿ ನಿರ್ವಹಿಸುವ ಮೂಲಕ ಮೀಸಲಾತಿಯಡಿ ಪಕ್ಷದ ಬೆಂಬಲಿತ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು ಎಂದರು.

ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್​ ಕುಮಾರ್​ ಮಾತನಾಡಿ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನದ ಸಹಿತ ಸಾಮಾಜಿಕ ಜಾಲತಾಣ ಸಕ್ರಿಯಗೊಳಿಸುವ ಶಂಖನಾದ ಅಭಿಯಾನ, ವ್ಯಾಪಾರಿಗಳ, ಪ್ರಬುದ್ಧರ ಸಮ್ಮೇಳನ, ಹಿರಿಯ ಕಾರ್ಯಕರ್ತರ ಸಭೆ, ವೃತ್ತಿಪರರ ಸಮಾವೇಶ, ಮೋರ್ಚಾಗಳ ಸಂಯುಕ್ತ ಸಭೆ, ಕೀ ವೋರ್ಟಸ್​ ಸಂಪರ್ಕ ಅಭಿಯಾನ, ಕಾರ್ಯಕರ್ತರ ಅನೌಪಚಾರಿಕ ಸಭೆ ಮತ್ತು ಮನೆ ಮನೆ ಬೇಟಿ ಮೂಲಕ ಕೇಂದ್ರ ಸರಕಾರದ ಸಾಧನೆಗಳ ಕರಪತ್ರ ವಿತರಣೆ ಇತ್ಯಾದಿ ಪ್ರಮುಖ ಕಾರ್ಯ ಚಟುವಟಿಕೆಗಳನ್ನು ಆದ್ಯತೆ ಮೇರೆಗೆ ಕಾರ್ಯಗತಗೊಳಿಸಬೇಕು ಎಂದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್​ ಶೆಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್​ ರತ್ನಾಕರ್​ ಹೆಗ್ಡೆ, ಶಾಸಕರಾದ ಯಶ್ಪಾಲ್​ ಎ. ಸುವರ್ಣ, ಕಿರಣ್​ ಕುಮಾರ್​ ಕೊಡ್ಗಿ, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್​, ಬೈಕಾಡಿ ಸುಪ್ರಸಾದ್​ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್​, ಗೀತಾಂಜಲಿ ಎಮ್​. ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್​ ಶೆಟ್ಟಿ, ಮನೋಹರ್​ ಎಸ್​. ಕಲ್ಮಾಡಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಎಸ್​.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಎಸ್​.ಟಿ. ಮೋರ್ಚಾ ಕಾರ್ಯದರ್ಶಿ ಉಮೇಶ್​ ನಾಯ್ಕ್​ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್​ ಶೆಟ್ಟಿ ಪಾದೆಬೆಟ್ಟು ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net