

ಉಡುಪಿ: ಕಾಂಗ್ರೆಸ್ ಪ್ರಾಣಾಳಿಕೆಯಲ್ಲಿ ಘೋಷಿಸಿದ 5 ಗ್ಯಾರಂಟಿಗಳನ್ನು ಯಥಾಪ್ರಕಾರ ಅನುಷ್ಠಾನ ಮಾಡಬೇಕು. ಇಲ್ಲದಿದ್ದರೆ ಜೂನ್ 1ರಿಂದ ಜಿಲ್ಲಾದ್ಯಂತ ವಿವಿಧ ಮೋರ್ಚಾ ಜೊತೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಶನಿವಾರ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಮಹಿಳೆಯರು ಟಿಕೆಟ್ ತೆಗೆದುಕೊಳ್ಳಬಾರದು. 200 ಯುನಿಟ್ ವರೆಗೂ ಯಾರು ಕೂಡ ವಿದ್ಯುತ್ ಬಿಲ್ ಪಾವತಿ ಮಾಡಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾವತಿಸಲಿದ್ದಾರೆ ಎಂದು ಜನರು ತಿಳಿಸಬೇಕು. ಕೆಎಸ್ಸಾರ್ಟಿಸಿ ಸಿಬಂದಿ ಹಾಗೂ ಮೆಸ್ಕಾಂ ಸಿಬಂದಿ ಜತೆಗೆ ಗಲಾಟೆ ಮಾಡಬಾರದು ಎಂದರು.
ಗ್ಯಾರಂಟಿಯನ್ನು ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲೇ ಜಾರಿಗೆ ತರಲಿದ್ದೇವೆ. ಎಲ್ಲರಿಗೂ ಉಚಿತವಾಗಿ ನೀಡುತ್ತೇವೆ ಎಂದು ಸಾರಿ ಸಾರಿ ಘೋಷಣೆ ಮಾಡಿದ್ದರು. ಈಗ ಷರತ್ತು ವಿಧಿಸುವುದು ಸರಿಯಲ್ಲ. ಜನರನ್ನು ಮರಳು ಮಾಡಿ ಅಧಿಕಾರ ಹಿಡಿದ ಬಳಿಕ ಕಾಂಗ್ರೆಸ್ ಗ್ಯಾರಂಟಿಗೆ ಷರತ್ತು ವಿಧಿಸುತ್ತಿದೆ. ಎಲ್ಲರಿಗೂ ಗ್ಯಾರಂಟಿ ಸಿಗಬೇಕು ಎಂದು ಒತ್ತಾಯಿಸಿದರು.
ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟಿವಟಿಕೆ ನಡೆಸಿದವರ ಪಟ್ಟಿಯನ್ನು ಮಂಡಲಗಳಿಂದ ಪಡೆಯುತ್ತಿದ್ದೇವೆ. ಜಿಲ್ಲಾ ಹಂತದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳುವ ಜತೆಗೆ ಕೆಲವು ಹೆಸರು ರಾಜ್ಯಕ್ಕೂ ಕಳುಹಿಸಲಿದ್ದೇವೆ. ಒಟ್ಟಿನಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು.
ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ, ಸಹ ವಕ್ತಾರ ಶಿವಕುಮಾರ ಅಂಬಲಪಾಡಿ, ಮಾಧ್ಯಮ ಪ್ರಕೋಷ್ಠದ ಪ್ರಮುಖ ಶ್ರೀನಿಧಿ ಹೆಗ್ಡೆ, ಕಾರ್ಯಾಲಯ ಕಾರ್ಯದರ್ಶಿ ಸತ್ಯನಂದ ನಾಯಕ್ ಉಪಸ್ಥಿತರಿದ್ದರು.