ಪಕ್ಷ ಟಿಕೇಟ್​ ನೀಡಿದರೆ ಸಂಸತ್​ನಲ್ಲಿ ಮೀನುಗಾರರ ಪರ ಧ್ವನಿ: ಪ್ರಮೋದ್​ ಮಧ್ವರಾಜ್​

pramod madhwaraj
Published on

ಉಡುಪಿ: ಗುಜರಾತ್​ ನಿಂದ ಪಶ್ಚಿಮ ಬಂಗಾಳದವರೆಗೆ ಮೀನುಗಾರ ಸಮುದಾಯವರು ಅಪಾರ ಸಂಖ್ಯೆಯಲ್ಲಿದ್ದರೂ, ಒಬ್ಬರೂ ಸಂಸದರಿಲ್ಲ. ಹೀಗಾಗಿ ಪಕ್ಷ ಬಯಸಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧವಿದ್ದು, ಪಕ್ಷ ಯಾರಿಗೆ ಟಿಕೆಟ್​ ಕೊಟ್ಟರೂ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಪ್ರಮೋದ್​ ಮಧ್ವರಾಜ್​ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಿಕೊಡುತ್ತದೆ ಎಂಬ ವಿಶ್ವಾಸ ಇದೆ. ಪಕ್ಷಕ್ಕೆ ನಾನು ಅರ್ಹ ಎಂದು ಕಂಡರೆ ನನಗೆ ಟಿಕೆಟ್​ ಕೊಡುತ್ತದೆ. ಬೇರೆಯವರು ಅರ್ಹರು ಇದ್ದರೆ ಅವರಿಗೆ ಟಿಕೆಟ್​ ಕೊಡುತ್ತದೆ. ಕಾರ್ಯಕರ್ತರು ಮತ್ತು ಜನರ ಅಭಿಪ್ರಾಯ ನನ್ನ ಕಡೆಗೆ ಇದೆ ಎಂಬ ಮಾಹಿತಿ ಇದೆ. ಎಲ್ಲರಿಗೂ ಟಿಕೆಟ್​ ಗಾಗಿ ಪ್ರಯತ್ನ ಮಾಡುವ ಹಕ್ಕು ಇದೆ. ನಾನು ಉಡುಪಿ&-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಆಕಾಂಕ್ಷಿ ಎಂಬುದಾಗಿ ಈಗಾಗಲೇ ನಾಯಕರ ಬಳಿ ಹೇಳಿದ್ದೇನೆ ಎಂದರು.

ಕಳೆದ ಆರು ತಿಂಗಳಿಂದ ಪ್ರವಾಸ ಮಾಡುತ್ತಿದ್ದೇನೆ. ಈಗಾಗಲೇ ರಾಜ್ಯದ 24 ಜಿಲ್ಲೆಯಲ್ಲಿ ಮೀನುಗಾರ ಮುಖಂಡರ ಸಭೆ ಮಾಡಿದ್ದೇನೆ. ವಿಶೇಷವಾಗಿ ಉಡುಪಿ-ಚಿಕ್ಕಮಗಳೂರಿನಲ್ಲಿ 6,000 ಬಿಜೆಪಿಯ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಎದುರಾಳಿಯನ್ನು ಲಘುವಾಗಿ ಪರಿಗಣಿಸುವುದು ಸರಿಯಲ್ಲ ಎಂದರು.

ದೇಶದ ಮೀನುಗಾರರ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಮುಂದೆ ಸಂಸತ್​ ನಲ್ಲಿ ಮಾತನಾಡಲು ಯೋಗ್ಯ ವ್ಯಕ್ತಿ ಬೇಕು ಎಂಬುದು ಮೀನುಗಾರರಿಗೆ ಮನವರಿಕೆ ಆಗಿದೆ. ಮೀನುಗಾರರ ಸಮಸ್ಯೆಯನ್ನು ಸರ್ಕಾರಗಳ ಮುಂದೆ ಸಮರ್ಥವಾಗಿ ಮಂಡಿಸುವ ಅನುಭವ ಜನಪ್ರತಿನಿಧಿಗೆ ಬೇಕಾಗುತ್ತದೆ ಎಂದರು.

ಮೊಗವೀರ ಮಹಾಜನ ಸಂಘದಲ್ಲಿ 12 ವರ್ಷ ಅಧ್ಯಕ್ಷನಾಗಿದ್ದೆ. ಕರ್ನಾಟಕ ಕರಾವಳಿ ಕ್ರಿಯಾ ಸಮಿತಿ ನ್ಯಾಷನಲ್​ ಫಿಶ್​ ವರ್ಕರ್ಸ್​ ಫಾರಂ ನಲ್ಲಿ ಕೆಲಸ ಮಾಡಿದ್ದೇನೆ. ಒಳನಾಡು ಮೀನುಗಾರಿಕಾ ನೀತಿಯನ್ನು ಕೂಡ ರೂಪಿಸಿದ್ದೆ. ಮೀನುಗಾರಿಕೆ ಕ್ಷೇತ್ರಕ್ಕೆ ನಮ್ಮ ಕುಟುಂಬದ ಸೇವೆ ಪರಿಗಣಿಸಬಹುದು ಎಂದರು.

ಹನುಮ ಧ್ವಜ ಕೆಳಗಿಳಿಸಿದ್ದು ಖಂಡನೀಯ
ಮಂಡ್ಯದಲ್ಲಿ ಹನುಮಧ್ವಜ ಕೆಳಗಿಳಿಸಿದ ಪ್ರಕರಣ ಅತ್ಯಂತ ಖಂಡನಿಯವಾಗಿದೆ. ಹನುಮ ಧ್ವಜ ಮತ್ತು ಹಿಂದೂ ಧರ್ಮದ ಸಂಕೇತದ ಧ್ವಜಗಳನ್ನು ಜನರು ಅಭಿಮಾನ ಮತ್ತು ಭಕ್ತಿಯಿಂದ ಹಾಕುತ್ತಾರೆ. ಅದಕ್ಕೆ ಅವಮಾನ ಮಾಡುವ ಕೆಲಸ ಯಾರು ಮಾಡಬಾರದು. ಅವಮಾನ ಮಾಡಿದರೆ ಅದು ಖಂಡನೀಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net