ಮೈಸೂರಿನಲ್ಲಿ ಯದುವೀರ್‌ಗೆ ಬಿಜೆಪಿ ಟಿಕೆಟ್? ಈ ಬಗ್ಗೆ ಪ್ರತಾಪ್ ಸಿಂಹ ಪ್ರತಿಕ್ರಿಯೆ ಏನು?

prathap simha Bjp
Published on

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸುವ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಮತ್ತೊಂದೆಡೆ ಸಂಸದ ಪ್ರತಾಪ್ ಸಿಂಹ ಟಿಕೆಟ್ ದೊರೆಯುವ ನಿರೀಕ್ಷೆಯಲ್ಲಿದ್ದಾರೆ.

ಈ ರಾಜಕೀಯ ಬೆಳವಣಿಗೆ ಕುರಿತು ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಸಂಸದರ ಟಿಕೆಟ್ ನಿರ್ಧಾರ ಮಾಡುವುದು ಕ್ಷೇತ್ರದ ಜನರು. ಪಕ್ಷದ ಹೈಕಮಾಂಡ್ ನನ್ನ ಕೆಲಸವನ್ನು ನೋಡಿ ನನಗೆ ಟಿಕೆಟ್ ನೀಡುವ ವಿಶ್ವಾಸ ಹೊಂದಿದ್ದೇನೆ. ನನ್ನ ಕೆಲಸ ಕಾರ್ಯಗಳಿಂದ ಕ್ಷೇತ್ರದ ಜನರು ಖುಷಿಯಾಗಿದ್ದು, ಹೈಕಮಾಂಡ್ ನನ್ನ ಪರವಾಗಿ ತೀರ್ಮಾನ ಕೈಗೊಳ್ಳುತ್ತದೆ ಎಂಬ ವಿಶ್ವಾಸ ಹೊಂದಿದ್ದೇನೆ ಎಂದರು.

ಯಾರೋ ಒಂದಷ್ಟು ಜನರು ಅಸೂಯೆಗೆ ನನ್ನ ವಿರುದ್ಧ ಮಾತನಾಡುತ್ತಾರೆ. ಕಾಯಲು ಬೆಟ್ಟದ ಮೇಲೆ ಒಬ್ಬಳು ತಾಯಿ ಇದ್ದಾಳೆ. ಮೈಸೂರಿನಲ್ಲಿ ಯಾರೂ ಮಾಡಿರದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ‘ಗ್ರೇಟರ್ ಮೈಸೂರು’ ರಚನೆ ಮಾಡಲು ನಾನು ಹೊರಟಿ ದ್ದೇನೆ, ಹಲವು ಅಭಿವೃದ್ಧಿ ಯೋಜನೆಗಳನ್ನು ನಾನು ಮಾಡಿದ್ದೇನೆ. ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲಿ ಪೆರಿಪೆರಲ್ ರಿಂಗ್ ರೋಡ್ ನಿರ್ಮಾಣ ಮಾಡಲು ಹೊರಟಿದ್ದೇನೆ, ಕೆಲಸವೇ ನನಗೆ ಶ್ರೀರಕ್ಷೆ. ಮೈಸೂರು-ಕೊಡಗು ಜನರು ನನ್ನ ಕೈ ಹಿಡಿಯುತ್ತಾರೆ. ತಾಯಿ ಚಾಮುಂಡೇಶ್ವರಿ ನನ್ನ ಕೈ ಬಿಡುವುದಿಲ್ಲ. ಈ ಬಾರಿ 2 ರಿಂದ 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

10 ವರ್ಷಗಳಿಂದ ಸಂಸದನಾಗಿ ನಿಯತ್ತಾಗಿ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ಪ್ರೀತಿಸುವವರಷ್ಟೇ ದ್ವೇಷ ಅಸೂಯೆ ಪಡುವವರು ಇರುತ್ತಾರೆ. ನಾನು ಚಾಲೆಂಜ್ ಮಾಡಿ ಮಾಡಿ ಹೇಳ್ತೇನೆ, ‘ನನ್ನ ರೀತಿ ಕೆಲಸ ಯಾರು ಮಾಡಿಲ್ಲ’. ಮೈಸೂರು-ಕೊಡಗು ಜನರ ಪ್ರೀತಿಯ ನಡುವೆ ಅಸೂಯೆ ಯಾವುದು ನಿಲ್ಲುವುದಿಲ್ಲ ಎಂದು ಹೇಳಿದರು.

ಹಿಂದು ಕಾರ್ಯಕರ್ತರಿಗೆ ಅನ್ಯಾಯವಾದಾಗ ಅವರ ಪರವಾಗಿ ನಿಂತಿದ್ದೇನೆ. ಬಿಜೆಪಿ ಕಾರ್ಯಕರ್ತರು ನನ್ನನ್ನು ನೋಡಿ ಖುಷಿ ಪಡುತ್ತಾರೆ. ಹಿಂದು ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರ ಪರವಾಗಿ ನಿಂತು ಎರಡು ಕೇಸ್ ಹಾಕಿಸಿಕೊಂಡಿದ್ದಾನೆ. ಪ್ರತಾಪ್ ಸಿಂಹ ರೂಲರ್ ಅಲ್ಲ, ಕೆಲಸಗಾರ. ಈ ಭಾಗದಲ್ಲಿ ಹನುಮ ಜಯಂತಿ ನಡೆಯುತ್ತಿದ್ದರೆ ಅದಕ್ಕೆ ನಾನು ಕಾರಣ. ಜನರು ನನ್ನ ಕೈ ಹಿಡಿಯಲು ತಯಾರಿದ್ದಾರೆ, ಪಕ್ಷ ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ ಎಂದರು.

ಪತ್ರಕರ್ತನಾಗಿದ್ದ ನನ್ನನ್ನು ಎರಡು ಬಾರಿ ಎಂಪಿ ಮಾಡಿದ್ದು ಬಿಜೆಪಿ. ಕಾಂಗ್ರೆಸ್ ಅವರಿಗೆ ಅಭ್ಯರ್ಥಿ ಹುಡುಕಲು ಆಗುತ್ತಿಲ್ಲ. ಪ್ರತಾಪ್ ಸಿಂಹ ಶಕ್ತಿ ಏನು ಎಂಬುದುಕಾಂಗ್ರೆಸ್ ಅವರಿಗೆ ಗೊತ್ತಿದೆ. ನಾನು ಗೆದ್ದರೆ ಸಿದ್ದರಾಮಯ್ಯ ಅವರ ಸೀಟು ಅಲುಗಾಡುತ್ತದೆ. ನನ್ನನ್ನು ಸೋಲಿಸಲು ಆಗುವುದಿಲ್ಲ ಎಂಬುದು ಕಾಂಗ್ರೆಸ್‌ಗೆ ಗೊತ್ತಿದೆ. ಹೀಗಿರುವಾಗ ಕಾಂಗ್ರೆಸ್‌ಗೆ ನಮ್ಮ ಪಕ್ಷ ಹೇಗೆ ಸಪೋರ್ಟ್ ಮಾಡಲು ಹೇಗೆ ಸಾಧ್ಯ? ಹಾಗಾಗಿ ನನಗೆ ಈ ಬಾರಿ ಟಿಕೆಟ್ ದೊರೆಯುವ ವಿಶ್ವಾಸ ಇದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net