

ನಿಪ್ಪಾಣಿ: ಜಿಲ್ಲೆಯ ಗಮನ ಸೆಳೆದಿದ್ದ ನಿಪ್ಪಾಣಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಗರಸಭೆ ಆಡಳಿತವನ್ನು ಬಿಜೆಪಿ ವಶಪಡಿಸಿಕೊಳ್ಳುವ ಮೂಲಕ ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಾಬಲ್ಯ ಮೆರೆದಿದ್ದಾರೆ. ನಗರಸಭೆಯಲ್ಲಿ ಗುರುವಾರ ಜರುಗಿದ ಚುನಾವಣೆಯಲ್ಲಿ ಬಿಜೆಪಿಯ ಸೋನಲ್ ಕೊಟಾಡಿಯಾ ಅಧ್ಯಕ್ಷೆಯಾಗಿ, ಸಂತೋಷ ಸಾಂಗಾವಕರ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಸೋನಲ್ ಕೊಟಾಡಿಯಾ, ಸಂತೋಷ ಸಾಂಗಾವಕರ ಅವರು ತಲಾ 17 ಮತ ಪಡೆದು ಎನ್‌ಸಿಪಿಯ ಶರದಚಂದ್ರ ಪವಾರ್ ಗುಂಪಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅನಿತಾ ಪಠಾಡೆ ಮತ್ತು ಉಪಾಧ್ಯಕ್ಷ ಅಭ್ಯರ್ಥಿ ಸಫ್ರಾಜ್ ದಾದಾಸಾಹೇಬ್ ಬಡೆಘರ್ ಅವರನ್ನು ಸೋಲಿಸಿದರು. ಇಬ್ಬರು ಕಾಂಗ್ರೆಸ್ ಮತ್ತು ಓರ್ವ ಪಕ್ಷೇತರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ, ಗುಲಾಲ ಎರಚಿ ಸಂಭ್ರಮಿಸಿದರು. ನಗರದ ಎಲ್ಲ ಮಹಾಪುರುಷರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಪಿ.ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ನಗರಸೇವಕ ಜಯವಂತ ಭಾಟಲೆ, ರಾಜೇಂದ್ರ ಗುಂದೇಶಾ, ನೀತಾ ಬಾಗಡೆ, ವಿಲಾಸ ಗಾಡಿವಡ್ಡರ, ನಗರಸೇವಕರು ಸೇರಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.