

ಹುಬ್ಬಳ್ಳಿ: ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನೇತೃತ್ವದ ತಂಡ ಬಿಜೆಪಿ ಬರ ಅಧ್ಯಯನದ ತಂಡದ ಭಾಗವಾಗಿ ತಾಲೂಕಿನ ಛಬ್ಬಿ, ಅಂಚಟಗೇರಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ರೈತರು, ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿತು.
ತಂಡದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಾಜಿ ಶಾಸಕ ಅಮೃತ ದೇಸಾಯಿ, ಷಣ್ಮುಖ ಗುರಿಕಾರ, ಬಸವರಾಜ ಕುಂದಗೊಳಮಠ, ಇತರರು ಇದ್ದರು.
‘‘10 ಎಕರೆ ಹೊಲದಲ್ಲಿ 30 ಸಾವಿರ ರೂ. ಖರ್ಚು ಮಾಡಿ ಗೋವಿನ ಜೋಳ ಬಿತ್ತನೆ ಮಾಡಿದ್ದೆ. ಮಳೆ ಇಲ್ಲದೇ ಬೆಳೆ ಸಂಪೂರ್ಣ ಹಾಳಾಗಿದೆ. ಅಧಿಕಾರಿಗಳಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಭೇಟಿ ನೀಡಿಲ್ಲ. ಮೇವು, ನೀರಿಲ್ಲದೇ ಗ್ರಾಮದ ಜನರು ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ’’ ಎಂದು ಛಬ್ಬಿ ಗ್ರಾಮದ ರೈತ ತವನಪ್ಪ ಅಳಲು ತೋಡಿಕೊಂಡರು.
ಮೂರು ವರ್ಷಗಳಿಂದ ಛಬ್ಬಿ ಗ್ರಾಮದ ಯಾವೊಬ್ಬ ರೈತರಿಗೂ ವಿಮಾ ಪರಿಹಾರ ದೊರತಿಲ್ಲ ಎಂದು ರೈತ ಅಮೃತೇಶ ಉಪ್ಪಿನ ದೂರಿದರು.
ಪ್ರತಿ ಬೇಸಿಗೆ ಕಾಲದಲ್ಲೂ ಕುಡಿಯುವ ನೀರಿಗೆ ಪರದಾಡುತ್ತೇವೆ. ಅರಳಿಕಟ್ಟಿ ಗ್ರಾಮಕ್ಕೆ ಹಂಚಿನಾಳ ಗ್ರಾಮದಿಂದ ಪೈಪ್ಲೈನ್ ಮೂಲಕ ಸದ್ಯ ಎಂಟು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೆ 15 ದಿನಕ್ಕೊಮ್ಮೆ ನೀರು ಬರಬಹುದು ಎಂದು ಗ್ರಾಮದ ಗುರುಸಿದ್ಧಗೌಡ ಪಾಟೀಲ ಸಮಸ್ಯೆ ಹೇಳಿಕೊಂಡರು.