

ಮಡಿಕೇರಿ: ಶಾಸಕ ಸ್ಥಾನಕ್ಕೆ ಎಲ್ಲೂ ಚ್ಯುತಿ ಬಾರದ ರೀತಿಯಲ್ಲಿ ಜನಪರ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಅಜಾತ ಶತ್ರು ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿ ದಹಿಸುವ ಮೂಲಕ ಬಿಜೆಪಿ ಕೊಡಗಿನ ಪ್ರಬುದ್ಧ ರಾಜಕಾರಣಕ್ಕೆ ಕಳಂಕ ತಂದಿದೆ ಎಂದು ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡಲು ಸ್ವಾತಂತ್ರ್ಯವಿದೆ. ಆದರೆ ಯಾವುದೇ ತಪ್ಪು ಮಾಡದ, ಉತ್ತಮ ವ್ಯಕ್ತಿತ್ವದ ಜನನಾಯಕರೊಬ್ಬರನ್ನು ಗುರಿ ಮಾಡಿ ರಾಜಕೀಯ ಕಾರಣಕ್ಕಾಗಿ ಅಗೌರವ ತೋರುವುದು ಖಂಡನೀಯವೆಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಗೌರವದ ಸ್ಥಾನ ಹೊಂದಿರುವ ಪೊನ್ನಣ್ಣ ಅವರಿಗೆ ಅಗೌರವ ತೋರುವ ಮೂಲಕ ಬಿಜೆಪಿ ಇಡೀ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜನರನ್ನು ಅವಮಾನಿಸಿದೆ. ಆದ್ದರಿಂದ ಬಿಜೆಪಿ ಬೇಷರತ್ತಾಗಿ ಕ್ಷೇತ್ರದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ ಅವರು, ಇದು ರಾಜಕೀಯ ದುರುದ್ದೇಶದ ಪ್ರತಿಭಟನೆಯೇ ಹೊರತು ಜನಪರ ಕಾಳಜಿಯ ಹೋರಾಟವಲ್ಲವೆಂದು ಕೆ.ಎ.ಯಾಕುಬ್ ಆರೋಪಿಸಿದ್ದಾರೆ.