

ಸಂಬರಗಿ: ಕಾಗವಾಡ ವಿಧಾನಸಭಾ ಕ್ಷೇತ್ರದ ಗ್ರಾಪಂ ಚುನಾವಣೆಯಲ್ಲಿ 22 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಕೆಂಪವಾಡ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವನಾಗಿ ಆಯ್ಕೆಯಾದ ನಂತರ ಕಾಗವಾಡ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನರು ನಮಗೆ ಅಶೀರ್ವಾದ ಮಾಡಿದ್ದಾರೆ. ಖಿಳೇಗಾಂವ, ಶಿರೂರ, ಸಂಬರಗಿ, ಜಂಬಗಿ, ಗುಂಡೇವಾಡಿ, ಪಾರ್ಥನಹಳ್ಳಿ, ಮದಭಾವಿ, ಅರಳಿಹಟ್ಟಿ, ಜಕ್ಕಾರಟ್ಟಿ, ಬಮ್ಮನಾಳ, ಸಿದ್ದೇವಾಡಿ ಶಿನಾಳ, ತಂಗಡಿ, ಮೋಳೆ, ಸೇರಿ ಹಲವು ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ ಎಂದರು. ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಹಾಗೂ ಕೆರೆ ತುಂಬುವ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ನಮ್ಮ ಅಭಿವೃದ್ಧಿ ಕೆಲಸದಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ. ಜಿಪಂ, ತಾಪಂ ಚುಣಾವಣೆಗಳಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದರು. ಆರ್.ಎಂ.ಪಾಟೀಲ, ಈಶ್ವರ ಕುಂಬಾರೆ, ರಾಮ ಸೋಡ್ಡಿ, ರವಿಕಾಂತ ಪಾಟೀಲ, ಅರ್ಜುನ ನಾಯಿಕ, ಶಿವಾಜಿ ಗಾಡಿವಡ್ಡರ, ಶ್ರೀಮಂತ ಎಳಾವಕರ, ಹನುಮಂತ ಖಟ್ಟೆ ತರರು ಇದ್ದರು.
ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಪಂ ಚುನಾವಣೆಯಲ್ಲಿ ಸಹೋದರರ ಮಕ್ಕಳು ಆಯ್ಕೆಯಾಗಿದ್ದರೆ, ಭಿರಡಿ ಗ್ರಾಪಂಗೆ ಸಹೋದರರ ಪತ್ನಿಯರು ಆಯ್ಕೆಯಾಗಿರುವುದು ವಿಶೇಷವಾಗಿದೆ. ತಾಲೂಕಿನ ನಂದಿಕುರಳಿ ತಾಪಂ ಹಾಲಿ ಸದಸ್ಯ ಪೃಥ್ವಿರಾಜ ಜಾಧವ(685) ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾಗಿದ್ದರೆ, ಹಾಲಿ ಗ್ರಾಪಂ ಸದಸ್ಯ ಅಮಿತ ಜಾಧವ (429) ಗ್ರಾಪಂಗೆ ಪುನರಾಯ್ಕೆಯಾಗಿ ಗಮನ ಸೆಳೆದಿದ್ದಾರೆ. ಇವರಿಬ್ಬರು ಸಹೋದರರ ಮಕ್ಕಳಾಗಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ನಸಲಾಪುರ ಜಿಪಂ ಮಾಜಿ ಸದಸ್ಯ ಸಿದ್ದಲಿಂಗ ಹಿರೇಕುರುಬರ ಗ್ರಾಪಂ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದಾರೆ. ಭಿರಡಿ ಗ್ರಾಪಂ ವಾರ್ಡ್ ಸಂಖ್ಯೆ 6 ರಲ್ಲಿ ನಾಗವ್ವ ಗಡಕರಿ ಅವರು ಆಯ್ಕೆಗೊಂಡಿದ್ದು, ವಾರ್ಡ್ ಸಂಖ್ಯೆ 1ರಲ್ಲಿ ಗೀತಾ ಗಡಕರಿ ಆಯ್ಕೆಗೊಂಡಿದ್ದಾರೆ. ಇವರಿಬ್ಬರು ಒಂದೇ ಮನೆತನದ ಸಹೋದರರ ಪತ್ನಿಯರಾಗಿದ್ದಾರೆ.