

ಕಲಬುರಗಿ: ರೈತರಿಗೆ ಹಾಲಿನ ಪ್ರೋತ್ಸಾಹ ಧನ ಸ್ಥಗಿತಗೊಳಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಭಾರತೀಯ ಜನತಾ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಗ್ರಾಮಾಂತರ ಹಾಗೂ ನಗರ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ವಿರೋಧಿ ರಾಜ್ಯ ಸರ್ಕಾರ, ಡೋಂಗಿ ಸರ್ಕಾರ, ಭ್ರಷ್ಟಾಚಾರದ ಸರ್ಕಾರ, ಹಾಲಿನ ಪ್ರೋತ್ಸಾಹ ಧನ ನೀಡಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಪಂಪ್‌ಸೆಟ್‌ಗೆ ದರ ಹೆಚ್ಚಳ, ಬರ ಪರಿಹಾರ ನೀಡದೆ ಅನ್ಯಾಯ ಮಾಡಿದ್ದು, ಇದೀಗ ರೈತರ ಆರ್ಥಿಕ ಶಕ್ತಿಯಾಗಿರುವ ಹೈನುಗಾರಿಕೆಯ ಪ್ರೋತ್ಸಾಹಧನ ನೀಡದೆ ಅನ್ನದಾತರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಇದು ರೈತರಿಗೆ ಆರ್ಥಿಕ ಹೊಡೆತ ನೀಡುತ್ತಿದೆ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ 718 ಕೋಟಿ ರೂ. ಹಾಲಿನ ಪ್ರೋತ್ಸಾಹ ಧನ ತಡೆ ಹಿಡಿದಿದ್ದು, ಕೂಡಲೇ ಅದನ್ನು ಬಿಡುಗಡೆ ಮಾಡಬೇಕು. ರೈತರಿಗೆ ಶಕ್ತಿ ತುಂಬಬೇಕು. ಇಲ್ಲದಿದ್ದರೆ ರೈತರೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಮಾತನಾಡಿ, ರಾಜ್ಯ ಸರ್ಕಾರ ಬರದ ಸಂಕಷ್ಟದಲ್ಲಿರುವ ರೈತರ ಮೇಲೆ ಬರೆ ಎಳೆಯುತ್ತಿದೆ. ರೈತರಿಗೆ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಹಾಲಿನ ಮೇಲೆ ವಿಶೇಷ ಪ್ರೋತ್ಸಾಹ ಧನ ನೀಡಲಾಗಿತ್ತು. ಆದರೆ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ರೈತರ ಆರ್ಥಿಕ ಶಕ್ತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೊಡೆತ ನೀಡುತ್ತಿದೆ. ಕೂಡಲೇ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.
ಪಾಲಿಕೆ ಉಪ ಮೇಯರ್ ಶಿವಾನಂದ ಪಿಸ್ತಿ, ಪ್ರಮುಖರಾದ ಮಲ್ಲಣ್ಣಗೌಡ ನಂದಿಕೂರ, ಉಮೇಶ ಪಾಟೀಲ್, ಶಿವಯೋಗಿ ನಾಗನಳ್ಳಿ, ಧರ್ಮಣ್ಣ ಇಟಗಾ, ಸಂತೋಷ ಹಾದಿಮನಿ, ಶಂಭುಲಿಂಗ ಬಳಬಟ್ಟಿ, ರವಿ ಕ್ರಾಂತಿಕಾರಿ, ಅಶೋಕ ಮಾನಕರ್, ಶಿವಾ ಅಷ್ಟಗಿ, ಚನ್ನು ಲಿಂಗನವಾಡಿ, ಸಚಿನ ಕಡಗಂಚಿ, ಸುನೀಲ ಬನಶೆಟ್ಟಿ, ವಿಜಯಲಕ್ಷ್ಮೀ ಗೊಬ್ಬುರಕರ್, ಶ್ರೀಶೈಲ ಪಾಟೀಲ್, ಶರಣು ಸಜ್ಜನ ಇತರರಿದ್ದರು.