

ಕಾರವಾರ: ಕಾಂಗ್ರೆಸ್ ಭ್ರಷ್ಟಾಚಾರದ ಜನಕ, ಅಭಿವೃದ್ಧಿಗೆ ಮಾರಕ, ಭಯೋತ್ಪಾದಕರಿಗೆ ಪ್ರೋತ್ಸಾಹದಾಯಕ, ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ ಪೂರಕ, ಭ್ರಷ್ಟಾಚಾರದ ಚಾಂಪಿಯನ್ ಎಂದು ವಿಧಾನಸಭಾ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜರಿದರು.
ಒಡಿಶಾ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಮನೆಯಲ್ಲಿ, ಕಪ್ಪು ಹಣ ಸಂಗ್ರಹ ವಿರೋಧಿಸಿ, ಅವರ ಮನೆಯ ಮೇಲೆ ಐಟಿ ದಾಳಿ ನಡೆಸಿ 350 ಕೋಟಿ ರೂ. ವಶಪಡಿಸಿಕೊಂಡಿದ್ದನ್ನು ಸ್ವಾಗತಿಸಿ ಬಿಜೆಪಿ ನಗರದಲ್ಲಿ ಸೋಮವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮತ ಪ್ರದರ್ಶನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲೋಕ ಸಭಾ ಚುನಾವಣೆಗೆ ಕಾಂಗ್ರೆಸ್ ಅಕ್ರಮ ಹಣ ಸಂಗ್ರಹಿಸುತ್ತಿದೆ. ಆದಾಯ ತೆರಿಗೆ ಇಲಾಖೆಯ ಕಾರ್ಯಾಚರಣೆಯನ್ನು ನಾವು ಸ್ವಾಗತಿಸುತ್ತೇವೆ. ಸಾಹು ಮತ್ತು ಅಂಥ ಇತರ ಭ್ರಷ್ಟರ ಖಜಾನೆಯನ್ನು ಬಯಲು ಮಾಡಬೇಕು. ಸಾಹು ಬಂಧಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಸರ್ಕಾರವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ. 6 ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದೆ. ಯಾವುದೇ ಗ್ಯಾರಂಟಿಗಳು ಫಲಾನುಭವಿಗಳಿಗೆ ತಲುಪಿಲ್ಲ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ರಾಜ್ಯ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಗೆ ಹಣ ಸಂಗ್ರಹಿಸಲು ಹೊರಟಿದೆ.
ಕಾಂಗ್ರೆಸ್ ಬೋಪೋರ್ಸ್ನಿಂದ ಹಿಡಿದು ಪ್ರತಿ ಹಂತದಲ್ಲೂ ಭ್ರಷ್ಟಾಚಾರ ಆಡಳಿತ ನೀಡುತ್ತ ಬಂದಿದೆ. ಭ್ರಷ್ಟಾಚಾರ ನಿರ್ಮೂಲನೆ ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿಯಾಗಿದೆ. ಈ ಕುರಿತು ಜಾಗೃತಿ ಮೂಡಿಸಲು ನಾವು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ರಾಜೀವ ಗಾಂಧಿ ಅವರು ಭ್ರಷ್ಟಾಚಾರದ ಪಿತಾಮಹರಾಗಿದ್ದರು. ಸೇನೆ ಶಸ್ತ್ರಾಸ್ತ್ರ ಖರೀದಿಯಲ್ಲೇ ಬೋಫೋರ್ಸ್ ಹಗರಣ ಮಾಡಿದ್ದರು. ಅವರ ಪಕ್ಷದ ಪ್ರಮುಖರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರು ಬೇಲ್ ಮೇಲೆ ಇದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬೇಲ್ ಮೇಲೆ ಇದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಜನಕ. ಅದಕ್ಕೆ ಧೀರಜ್ ಸಾಹು ಎಂಬ ರಾಜ್ಯಸಭಾ ಎಂಪಿ ಸ್ಪಷ್ಟ ಉದಾಹರಣೆ ಎಂದರು.
ಎಂಎಲ್‌ಸಿ ಗಣಪತಿ ಉಳ್ವೇಕರ್ ಮಾತನಾಡಿ, ಈ ಹಿಂದೆ ದೇಶವನ್ನು ಲೂಟಿ ಮಾಡಿದ ಸರ್ಕಾರ ಮತ್ತೆ ಅಽಕಾರಕ್ಕೆ ಬಂದು ಲೂಟಿ ಮಾಡುತ್ತಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ವಿಭಾಗ ಪ್ರಭಾರಿ ಎನ್.ಎಸ್.ಹೆಗಡೆ, ಜಿಲ್ಲಾ ವಕ್ತಾರ ನಾಗರಾ ನಾಯಕ, ಚಂದ್ರು ಎಸಳೆ, ಎಂ.ಜಿ.ಭಟ್, ಗಜಾನನ ಗುನಗಾ, ನಾಗೇಶ ಕುರ್ಡೇಕರ್, ಸುಭಾಷ ಗುನಗಿ, ಸುಜಯ ನಾಯ್ಕ ಇದ್ದರು.