

ಕಲಬುರಗಿ: ಸಂಸತ್ತಿನ ಚಳಿಗಾಲದಲ್ಲಿ ದುರ್ವರ್ತನೆ ಆರೋಪದಲ್ಲಿ ಸಂಸತ್ತಿನಿಂದ ಅಮಾನತುಗೊಂಡ ಸಂಸದರು ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ಧನಕರ್ ಅವರನ್ನು ಅಣಕಿಸಿ ಇಡೀ ರಾಷ್ಟçಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಗುರುವಾರ ಬಿಜೆಪಿ ಮುಖಂಡರು, ಕಾರ್ಯಕರ್ತರು, ಶಾಸಕರು ಪ್ರತಿಭಟನೆ ನಡೆಸಿ, ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ ಬ್ಯಾನರ್ಜಿ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಮಾತನಾಡಿ, ದೇಶದ ಸಂಸತ್ತಿನ ಇತಿಹಾಸದಲ್ಲಿ ಇದೊಂದು ಕರಾಳ ದಿನವಾಗಿದ್ದು, ಸಾಂವಿಧಾನಿಕ ಹುದ್ದೆಗೆ ಅವಮಾನಿಸುವ ಮೂಲಕ ಕಾಂಗ್ರೆಸ್ ಅತ್ಯಂತ ಕೀಳು ಮಟ್ಟಕ್ಕೆ ಇಳಿಯುವ ಜತೆಗೆ ಪ್ರಜಾಸತ್ತಾತ್ಮಕತೆಯನ್ನು ಮರೆತ್ತಿದೆ. ರಾಷ್ಟçದ ಸಂವಿಧಾನಕ್ಕೆ ಅವಮರ್ಯಾದೆ ತೋರಿದ್ದು, ಕೂಡಲೇ ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಉಪರಾಷ್ಟ್ರಪತಿಯನ್ನು ಅಣಕಿಸುತ್ತಿರುವ ವೇಳೆ ಅದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿಡಿಯೋ ಮಾಡುವ ಮೂಲಕ ತಮ್ಮ ಹೀನ ಮನಸ್ಥಿತಿಯನ್ನು ಅನಾವರಣ ಮಾಡಿಕೊಂಡಿದ್ದಾರೆ. ಇವರಿಗೆ ಸಂಸತ್ತಿನಲ್ಲಿ ಇರುವ ನೈತಿಕತೆಯೇ ಇಲ್ಲದಂತೆ ವರ್ತಿಸಿದ್ದಾರೆ ಎಂದು ಕಿಡಿ ಕಾರಿದರು.
ಬಿಜೆಪಿ ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್ ಮಾತನಾಡಿ, ಕಾಂಗ್ರೆಸ್ ನಾಯಕರು ತಾವು ಜವಾಬ್ದಾರಿಯುತ ಸಂಸದ ಸ್ಥಾನದಲ್ಲಿ ಇದ್ದೇವೆ ಎಂಬ ಅರಿವು ಇಲ್ಲದಂತೆ ವರ್ತಿಸುತ್ತಿದ್ದಾರೆ. ರಾಷ್ಟçದ ಪರಮೋಚ್ಛ ಸ್ಥಾನಗಳಿಗೆ ಅಗೌರವ ತೋರುವ ಮೂಲಕ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಕೂಡಲೇ ಎಲ್ಲರೂ ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಉಪಮೇಯರ್ ಬಸವರಾಜ ಪಿಸ್ತಿ, ಪ್ರಮುಖರಾದ ಶಿವಯೋಗಿ ನಾಗನಹಳ್ಳಿ, ಲಿಂಗರಾಜ ಬಿರಾದಾರ, ಸಂತೋಷ ಹಾದಿಮನಿ, ಶರಣು ಸಜ್ಜನ್, ರಾಜು ನಾಗನಹಳ್ಳಿ, ನಾಗರಾಜ, ಮಲ್ಲು ಉದನೂರ, ಆನಂದ ಕಣಸೂರ ಸೇರಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.