

ಮಂಡ್ಯ: ಕಾಂಗ್ರೆಸ್ ಸರ್ಕಾರದ ನೀತಿಗಳಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಸ್ವತಂತ್ರೃ ತನಿಖಾ ಸಂಸ್ಥೆ ಸಿಐಜಿ ವರದಿ ಮಾಡಿದೆ. ಇದರೊಂದಿಗೆ ರಾಜ್ಯದ ಆರ್ಥಿಕತೆಯನ್ನು ಕಾಂಗ್ರೆಸ್ 20 ವರ್ಷದ ಹಿಂದಕ್ಕೆ ತೆಗೆದುಕೊಂಡು ಹೋಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಟೀಕಿಸಿದರು.
ಗ್ಯಾರಂಟಿಗಳ ಕಾರಣದಿಂದಾಗಿ ರಾಜ್ಯದ ಆರ್ಥಿಕ ವ್ಯವಸ್ಥೆ ಶೇ.16ರಿಂದ ಶೇ.11ಕ್ಕೆ ಇಳಿದಿದೆ. ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಯಾವ ಪುರುಷಾರ್ಥಕ್ಕಾಗಿ 2 ಲಕ್ಷ ಕೋಟಿ ರೂ ಸಾಲ ಮಾಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ 1 ಟ್ರಿಲಿಯನ್ ಆರ್ಥಿಕತೆ ಬೆಳವಣಿಗೆ ಉದ್ದೇಶ ಹೊಂದಲಾಗಿತ್ತು. ಆದರೆ ಕಾಂಗ್ರೆಸ್‌ನ ಗ್ಯಾರಂಟಿಗಳಿಂದಾಗಿ ರಾಜ್ಯದ ಜಿಡಿಪಿ ಕುಸಿಯುತ್ತಿದೆ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬಂತೆ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಪತನಕ್ಕೆ ದೂಡುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕಿಂತಲೂ ಹೆಚ್ಚು ಸಾಲ ಮಾಡಿದೆ ಎಂದು ಕಾಂಗ್ರೆಸ್ ಬೊಟ್ಟು ಮಾಡಿ ತೋರುತ್ತಿದೆ. 137 ಲಕ್ಷ ಕೋಟಿ ರೂ ಸಾಲ ಮಾಡಿರುವ ಕೇಂದ್ರ ಸರ್ಕಾರ ಶೇ.4ರಷ್ಟಿದ್ದ ದೇಶದ ಜಿಡಿಪಿಯನ್ನು ಶೇ.10ಕ್ಕೆ ಕೊಂಡೊಯ್ದಿದೆ. ರಸ್ತೆ, ರೈಲ್ವೆ, ವಿಮಾನ ನಿಲ್ದಾಣಗಳು ಸೇರಿದಂತೆ ಹಲವು ಬೃಹತ್ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಶಕ್ತಿ ಯೋಜನೆ ವರ್ಲ್ಡ್ ರೆಕಾರ್ಡ್ ಸೇರಿದೆಯೆಂದು ಕಾಂಗ್ರೆಸ್ ಹೆಮ್ಮೆ ಪಡುತ್ತಿದೆ. ತಮ್ಮ ಗ್ಯಾರಂಟಿಗಳ ಸಾಧಕ ಬಾಧಕಗಳ ಕುರಿತು ಶ್ವೇತ ಪತ್ರ ಹೊರಡಿಸುವಂತೆ ಸವಾಲೆಸೆದರು.
137 ಕೋಟಿ ರೂ ವ್ಯಯಿಸಿದ ಸಿದ್ದರಾಮಯ್ಯ ಸರ್ಕಾರ ಜಾತಿ ಸಮೀಕ್ಷೆ ನಡೆಸಿ ಮೀಸಲಾತಿ ಘೋಷಿಸಿದೆ. ಒಳ ಮೀಸಲಾತಿಯಲ್ಲಿ ಸಣ್ಣ ಜಾತಿಗಳಿಗೆ ಅನ್ಯಾಯ ಮಾಡಿದೆ. ಸಮೀಕ್ಷೆಗಳ ಪ್ರಾಯೋಗಿಕ ದಾಖಲಾತಿಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡದೇ ಮುಖ್ಯಮಂತ್ರಿಗಳು ಏಕೆ ಹೋದರು ಎಂದು ಪ್ರಶ್ನಿಸಿದ ಅವರು, ಮತಗಳ್ಳತನ ಆರೋಪ ಮಾಡಿದ ರಾಹುಲ್‌ಗಾಂಧಿ ತಾಕತ್ತಿದ್ದರೆ ಅಫಿಡೆವಿಟ್ ಸಲ್ಲಿಕೆ ಮಾಡಲಿ. ಗೆದ್ದರೆ ಚುನಾವಣಾ ಆಯೋಗ ಸರಿಯಿದೆ. ಸೋತರೆ ಆಯೋಗ ಸರಿಯಲ್ಲವೆಂದು ಹೇಳುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸುವ ರಾಹುಲ್‌ಗಾಂಧಿ ನ್ಯಾಯಾಲಯದಲ್ಲಿ ಈಗಾಗಲೇ 11 ಕಾರಣಗಳಿಗೆ ಕ್ಷಮೆ ಕೇಳಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಕೊನೆ ಇಲ್ಲದಂತಾಗಿದೆ. ಬಿಜೆಪಿ ಸರ್ಕಾರದಲ್ಲಿ ಶೇ.40ರಷ್ಟು ಕಮಿಷನ್ ಎಂದು ಆರೋಪ ಮಾಡಲಾಗಿತ್ತು. ಇದೀಗ ಗುತ್ತಿಗೆದಾರರ ಸಂಘದವರು ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್ಚಿನ ಕಮಿಷನ್ ಪಡೆಯಲಾಗುತ್ತಿದೆ ಎಂದಿದ್ದಾರೆ. ಗ್ಯಾರಂಟಿ ಯೋಜನೆಗಳ ಸಾಧಕ ಬಾಧಕಗಳನ್ನು ಪರಿಶೀಲಿಸಿದ ಸಿಐಜಿ ಸಂಸ್ಥೆ ವರದಿಯನ್ನು ಕಾಂಗ್ರೆಸ್ ಗಮನ ಹರಿಸುತ್ತಿಲ್ಲ. ಸ್ವತಂತ್ರೃ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರಕ್ಕೆ ನಂಬಿಕೆಯಿಲ್ಲ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಪ್ರಧಾನ ಕಾರ್ಯದರ್ಶಿ ವಿವೇಕ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ, ಮಾಧ್ಯಮ ವಕ್ತಾರ ನಾಗಾನಂದ, ಚಂದ್ರು ಇದ್ದರು.