

ಮೈಸೂರು: ಬಿಜೆಪಿ ವಿಶ್ವದಲ್ಲೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿದ್ದು ಅದನ್ನು ಇನ್ನಷ್ಟು ಗಟ್ಟಿಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಅಶ್ವಿನಿಗೌಡ ಸಲಹೆ ನೀಡಿದರು.
ನಗರ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ನಗರ ಘಟಕದ ಸದಸ್ಯತ್ವ ಅಭಿಯಾನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿಯಿಂದ ಸಂಸತ್ತಿನವರೆಗೂ ಸದಸ್ಯರನ್ನು ಹೊಂದಿರುವ ಪಕ್ಷ ನಮ್ಮದಾಗಿದೆ. ಅಲ್ಲದೆ ವಿಶ್ವದಲ್ಲೆ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಬಿಜೆಪಿಯಾಗಿದೆ. ಈಗ ಮತ್ತೆ ಸದಸ್ಯತ್ವ ಆರಂಭವಾಗಲಿದ್ದು, ಇನ್ನು ಹೆಚ್ಚಿನ ಸದಸ್ಯತ್ವ ನೋಂದಣಿ ಮಾಡಬೇಕು. ಸಂಘಟನೆಯ ಬಲ, ಕಾರ್ಯಕರ್ತರ ಆತ್ಮವಿಶ್ವಾಸವಿದ್ದರೆ ಗ್ರಾಪಂನಿಂದ ಲೋಕಸಭಾ ಚುನಾವಣೆಯನ್ನು ಸುಲಭವಾಗಿ ಎದುರಿಸಬಹುದು ಎನ್ನುವುದಕ್ಕೆ ನಮ್ಮ ಪಕ್ಷ ಸಾಕ್ಷಿಯಾಗಿದೆ. ಜಗತ್ತಿನಲ್ಲೆ ಆರ್ಥಿಕ ವ್ಯವಸ್ಥೆಯಲ್ಲಿ ಭಾರತ ಐದನೇ ಸ್ಥಾನದಲ್ಲಿರಲು ಪ್ರಧಾನಿ ಮೋದಿ ಅವರ ಆರ್ಥಿಕ ನೀತಿಗಳು ಕಾರಣವಾಗಿವೆ ಎಂದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ಜನ್ಮದಿನಾಚರಣೆ ಕಾರಣ ಈ ಬಾರಿ ಸದಸ್ಯತ್ವವನ್ನು ಹೆಚ್ಚು ಮಾಡಿಸಲಾಗುತ್ತಿದೆ. ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರನ್ನು ನೋಂದಣಿ ಮಾಡಿಸಬೇಕು. ದೇಶದ ಅಭಿವೃದ್ಧಿ ಯೋಜನೆಗಳನ್ನು ತಿಳಿಸಿಕೊಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಮಾತನಾಡಿ, ಕ್ಷೇತ್ರದ ಮತದಾರರಲ್ಲಿ ಶೇ.10 ಸದಸ್ಯತ್ವ ಮಾಡಿದರೆ ಚುನಾವಣೆ ಯಾವಾಗ ಬೇಕಾದರೂ ಎದುರಿಸಬಹುದು ಎನ್ನುವ ನಂಬಿಕೆ ಇದೆ. ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿ ಎಲ್ಲ ವರ್ಗಗಳ ಜನರನ್ನು ನೋಂದಣಿ ಮಾಡಿದರೆ ಸುಲಭವಾಗಿ ಗೆಲ್ಲಬಹುದು ಎಂದರು.
ಮೈಸೂರು ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್ ಮಾತನಾಡಿ, ಪ್ರತಿ ಒಂಬತ್ತು ವರ್ಷಗಳಿಗೊಮ್ಮೆ ಸದಸ್ಯತ್ವವನ್ನು ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕು. ಬಿಜೆಪಿ ಕಾರ್ಯಕರ್ತರು ಎನ್ನುವುದಕ್ಕೆ ಮತ್ತೊಮ್ಮೆ ನೋಂದಣಿ ಮಾಡಿಕೊಂಡು ನಂತರ ಸುತ್ತ್ತಲಿನ ಮನೆ, ಬೂತ್, ವಾರ್ಡ್, ಕ್ಷೇತ್ರದಲ್ಲಿ ನೋಂದಣಿ ಮಾಡಿಸಬೇಕು. ಸಂಘಟನೆ ಬೆಳೆಸಲು ಇದು ಅನುಕೂಲವಾಗಲಿದೆ. ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಪಕ್ಷವಾಗಿದೆ. ಬಿಜೆಪಿಗೆ ನಮ್ಮದೊಂದು ಕೊಡಗೆ ಇರಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಸದಸ್ಯತ್ವ ಮಾಡಿಸಬೇಕು ಎಂದು ಸಲಹೆ ನೀಡಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಪ್ರಭಾರಿ ಎನ್.ವಿ.ಫಣೀಶ್, ಮಾಜಿ ಮೇಯರ್ ಎಸ್.ಸತೀಶ್‌ಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ.ಗಿರಿಧರ್, ಬಿ.ಎಂ.ರಘು, ಮಹೇಶ್ ಇದ್ದರು.