

ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಲು ಉತ್ಪಾದಕರ ರೈತರಿಗೆ ಪ್ರತಿ ಲೀಟರ್‌ಗೆ ನೀಡಲಾಗುತ್ತಿದ್ದ ಹಣದಲ್ಲಿಯೂ 1 ರಿಂದ 2 ರೂಪಾಯಿಯನ್ನು ವಿವಿಧ ಒಕ್ಕೂಟದಲ್ಲಿ ತಡೆಹಿಡಿಯಲಾಗಿದೆ. ಸರ್ಕಾರ ಬೇಜಬ್ದಾರಿತನ ಬಯಲಿಗೆಳೆಯುವ ನಿಟ್ಟನಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಆಗ್ರಹಿಸಿದರು.
ಅತಿಯಾದ ರಾಜಕೀಯ ಹಸ್ತಕ್ಷೇಪ, ಅಧಿಕಾರಿಗಳ ನಿರಾಸಕ್ತಿ, ರೈತ ವಿರೋಧಿ ಧೋರಣೆ ಮತ್ತು ಖಾಸಗಿ ಹಾಲು ಉತ್ಪಾದಕರ ಸಂಸ್ಥೆಗಳೊಂದಿಗೆ ಸ್ಪರ್ಧೆ ನೀಡುವಲ್ಲಿ ರಾಜ್ಯ ಸರ್ಕಾರ ಹಾಗೂ ಹಾಲು ಮಹಾ ಮಂಡಳಿ ವಿಫಲವಾಗಿದೆ. ಪಶು ಸಂಗೋಪನೆ ಭಾರತ ಕೃಷಿ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ. ಇಂತಹ ಸಂಸ್ಥೆಗಳನ್ನು ಸರಿಯಾದ ನಿಟ್ಟಿನಲ್ಲಿ ಕರೆದೊಯ್ದು ಹಾಲು ಉತ್ಪಾದಕರನ್ನು ಆರ್ಥಿಕ ಸ್ವಾವಲಂಭಿ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಜ್ಯದಲ್ಲಿ 15 ಒಕ್ಕೂಟಗಳಿವೆ, 70 ಉಪ ಉತ್ಪನ್ನಗಳನ್ನು ಸರಿಯಾದ ರೀತಿಯಲ್ಲಿ ಮಾರುಕಟ್ಟೆ ಮಾಡುವಲ್ಲಿ ನಿರಾಸಕ್ತಿ ವಹಿಸಿರುವುದು ಕಣ್ಣಿಗೆ ಕಾಣುವ ಸತ್ಯ. 15 ಹಾಲು ಒಕ್ಕೂಟಗಳಿಂದ 96.89 ಲಕ್ಷ ಉತ್ಪಾದಕರಿಂದ ನಿತ್ಯ 82.92 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. 46.27 ಲಕ್ಷ ಲೀಟರ್ ಹಾಲನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. 9.45 ಲಕ್ಷ ಲೀಟರ್ ಹಾಲನ್ನು ಮೊಸರು ತಯಾರಿಸಲಾಗುತ್ತಿದೆ. ಉಳಿದ ಹಾಲನ್ನು ಮೌಲ್ಯವರ್ಧನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದಾಗಿ ರಾಜ್ಯದ ರೈತರು ತತ್ತರಿಸಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ ತಂದಿದ್ದ ರೈತ ಪರ ಯೋಜನೆಗಳನ್ನು ನಿಲ್ಲಿಸಲಾಗಿದೆ. ಕೇಂದ್ರ ಸರ್ಕಾರ ನೀಡಿದ ಬರ ಪರಿಹಾರದ ಹಣವನ್ನು ಮತ್ತು ರೈತರಿಗೆ ನೀಡುವ ಪಿಂಚಣಿ ಹಣವನ್ನು ಬ್ಯಾಂಕ್‌ಗಳು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿವೆ. ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ರೀತಿಯಲ್ಲಿ ಬೆಲೆ ಸಿಗುತ್ತಿಲ್ಲ. ಕೇಂದ್ರ ಪುರಸ್ಕೃತ ರೈತಪರ ಯೋಜನೆಗಳನ್ನು ಅನುಷ್ಠಾನ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದು ಕಿಡಿಕಾರಿದರು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅಶೋಕ್ ಜಯರಾಂ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಹೇಂದ್ರ, ಕಾರ್ಯಕಾರಿಣಿ ಸದಸ್ಯ ಜೋಗೀಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜವರೇಗೌಡ, ಕಾರ್ಯದರ್ಶಿ ವೈರಮುಡಿ ಇದ್ದರು.