ಅಭಿವೃದ್ಧಿ ಶೂನ್ಯ ಕೈ ಸರ್ಕಾರ ವಿಜಯೇಂದ್ರ ವಾಗ್ಧಾಳಿ

19Tmk_BJP_BYV_01
Published on

ತುಮಕೂರು: ಪ್ರಪಂಚದ ಅತೀ ದೊಡ್ಡ ರಾಜಕೀಯ ಪಕ್ಷ ಎನ್ನಿಸಿಕೊಂಡಿರುವ ಭಾರತೀಯ ಜನತಾ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಸೆ.2ರಂದು ಪ್ರಧಾನಿ ನರೇಂದ್ರಮೋದಿ ಅವರು ಚಾಲನೆ ನೀಡಿದ್ದು ರಾಜ್ಯದಲ್ಲೂ ಅಭಿಯಾನ ಬಿರುಸಿನಿಂದ ಸಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಗುರುವಾರ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿಯೂ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದ್ದು ಪ್ರಮುಖರೊಂದಿಗೆ ಸಭೆ ಕೂಡ ನಡೆಸಲಾಗಿದೆ ಎಂದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ, ಇದೊಂದು ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಜನ ಮಾತನಾಡುತ್ತಿದ್ದಾರೆ. ಕಾಂಗ್ರೆಸ್​ ಶಾಸಕರೂ ಸೇರಿದಂತೆ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿಯೂ ಕೆಲಸ ಕಾರ್ಯಗಳು ಆಗುತ್ತಿಲ್ಲ, ಒಂದು ರೂಪಾಯಿ ಅನುದಾನ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಯಾರಿಗೂ ಅನುದಾನ ನೀಡದೆ ಸಿಎಂ ಸಿದ್ದರಾಮಯ್ಯ ರಾಜ್ಯದ ಎಲ್ಲಾ ಸಮಾಜಕ್ಕೂ ಅನ್ಯಾಯ ಮಾಡುತ್ತಿದ್ದಾರೆ, ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಇಂತಹ ಸರ್ಕಾರದಿಂದ ಅಭಿವೃದ್ಧಿ ನಿರೀಸಲು ಸಾಧ್ಯವಿಲ್ಲ, ಕಳೆದ ಒಂದು ವರ್ಷದಿಂದಲೂ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹರಿಹಾಯ್ದರು.

ಗ್ಯಾರಂಟಿ ಯೋಜನೆಗಳು ಎಂದು ಕಾಂಗ್ರೆಸ್​ ಮುಖಂಡರು ಬೊಬ್ಬೆ ಹೊಡೆಯುತ್ತಿದ್ದರೂ ಪ್ರಸ್ತುತ ಅದೂ ನಿಂತು ಹೋಗಿದೆ, ಗೃಹಲಕ್ಷಿ$್ಮ ಹಣ ನೀಡಲಾಗದ ಸರ್ಕಾರದ ವಿರುದ್ಧ ಜನರು ಛೀಮಾರಿ ಹಾಕುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಭಾಗದಲ್ಲಿ ಬಸ್​ಗಳ ಕೊರತೆಯಾಗಿದೆ, ಶಾಲೆ, ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಬಸ್​ಗೆ ಕಾಯುವಂತಾಗಿದೆ ಎಂದರು.

ರಾಜ್ಯದಲ್ಲಿ ಎದುರಾಗಿರುವ ಬರ ಮತ್ತು ನೆರೆಯ ಸಂದರ್ಭದಲ್ಲಿ ಸರ್ಕಾರ ಹೇಗೆ ನಡೆದುಕೊಂಡಿದೆ ಎಂದು ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಪಕ್ಷದ ಸದಸ್ಯತ್ವ ಸಭೆಯಲ್ಲಿ ರಾಜ್ಯ ಪ್ರಧಾನಕಾರ್ಯದರ್ಶಿ ಜೆ.ಪ್ರೀತಂಗೌಡ, ಶಾಸಕರುಗಳಾದ ಜಿ.ಬಿ.ಜ್ಯೋತಿಗಣೇಶ್​, ಬಿ.ಸುರೇಶಗೌಡ, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್​, ವಿಧಾನಪರಿಷತ್​ ಸದಸ್ಯರಾದ ಕೆ.ಸಿ.ನವೀನ್​, ಕೇಶವಪ್ರಸಾದ್​, ಮಾಜಿ ಶಾಸಕರಾದ ಮಸಾಲಜಯರಾಂ, ಡಾ.ಎಂ.ಆರ್​.ಹುಲಿನಾಯ್ಕರ್​, ಎಂ.ಡಿ.ಲಕ್ಷಿ$್ಮನಾರಾಯಣ್​, ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಮುಖಂಡರಾದ ಎಸ್​.ಡಿ.ದಿಲೀಪ್​ಕುಮಾರ್​, ಡಿ.ಕೃಷ್ಣಕುಮಾರ್​, ವೈ.ಎಚ್​.ಹುಚ್ಚಯ್ಯ, ಬ್ಯಾಟರಂಗೇಗೌಡ, ಟಿ.ಎಚ್​.ಹನುಮಂತರಾಜು, ಬಿ.ಎಚ್​.ನವಚೇತನ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net