ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ವಿರೋಧ ಸಲ್ಲ

23Manju3
ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈರಣ್ಣ ಕಡಾಡಿ ಮಾತನಾಡಿದರು. ಹನುಮಂತ ಕೊಂಗಾಲಿ, ರಮೇಶ ದೇಶಪಾಂಡೆ ಇತರರಿದ್ದರು.
Published on

ಬೆಳಗಾವಿ: ಪಕ್ಷದ ರಾಷ್ಟ್ರೀಯ ವರಿಷ್ಠರು ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದ್ದಾರೆ. ಹಾಗಾಗಿ ನಾವೆಲ್ಲರೂ ಒಪ್ಪಿಕೊಳ್ಳಬೇಕು ವಿನಃ ವಿರೋಧಿಸುವುದು ಸರಿಯಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಸಂಘಟನೆ ಹಿತದೃಷ್ಟಿಯಿಂದ ಪಕ್ಷದ ಹೈಕಮಾಂಡ್ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದೆ. ಇದನ್ನು ವಿರೋಧಿಸುವವರು ಪಕ್ಷದ ಆಂತರಿಕ ಚೌಕಟ್ಟಿನಲ್ಲಿಯೇ ಮಾತನಾಡಬೇಕು. ಸಾರ್ವಜನಿಕವಾಗಿ ಮಾತನಾಡುವುದರಿಂದ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಾಹನ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ. ಆದರೆ, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ವಾಹನದಲ್ಲಿ ಏನಿತ್ತು? ಎಂಬುದು ನಮಗೇನು ಗೊತ್ತಿಲ್ಲ. ಮುಖ್ಯಮಂತ್ರಿ, ಗೃಹ ಸಚಿವರು ತನಿಖೆ ನಡೆಸಿ ಜನರಲ್ಲಿರುವ ಅನುಮಾನ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಪಂಚ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ನಿಗಮ ಮಂಡಳಿಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಭೋವಿ, ಉಪ್ಪಾರ, ಆದಿ ಜಾಂಬವ, ನೇಕಾರ, ವಿಶ್ವಕರ್ಮ, ಈಡಿಗ ಬಿಲ್ವ ಸಮುದಾಯದ, ಸಫಾಯಿ ಕರ್ಮಚಾರಿ ನಿಗಮ ಮಂಡಳಿಗಳಿಗೆ ವರ್ಷಗಳಿಂದ ಅನುದಾನ ಬಂದಿಲ್ಲ. ರಾಜ್ಯದಲ್ಲಿ ಆರ್ಥಿಕ ದಿವಾಳಿಯಾಗಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಕೊಲೆ, ಕಳ್ಳತನ, ಬ್ಯಾಂಕ್ ದರೋಡೆ, ಗೋವುಗಳ ಮೇಲೆ ಹಲ್ಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕಾಂಗ್ರೆಸ್ ಪೊಲೀಸ್ ಠಾಣೆಗಳನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರದ ಖಜಾನೆಯಲ್ಲಿ ಅನುದಾನ ಇಲ್ಲದಿರುವ ಕಾರಣ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣ ಕೈ ಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

ಕಳೆದ ನಾಲ್ಕು ವರ್ಷಗಳಿಂದ ಜಿಪಂ, ತಾಪಂ ಚುನಾವಣೆ ನಡೆದಿಲ್ಲ. ಸರ್ಕಾರವು ಕುಂಟು ನೆಪ ಹೇಳಿಕೊಂಡು ದಿನ ಕಳೆಯುತ್ತಿದೆ. 60 ಎಪಿಎಂಸಿಗಳಿಗೂ ಚುನಾವಣೆ ನಡೆದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ. ಮುಡಾ ಹಗರಣದಲ್ಲಿ ರಾಜೀನಾಮೆ ನೀಡಬೇಕಾಗಿದ್ದ ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಮತ್ತೊಂದೆಡೆ ಲೋಕಾಯುಕ್ತ ಕ್ಲೀನ್ ಚೀಟ್ ನೀಡಿರುವುದು ದುರ್ದೈವದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯರಾದ ಹನುಮಂತ ಕೊಂಗಾಲಿ, ರಾಜಶೇಖರ ಡೋಣಿ, ಬಿಜೆಪಿ ಮುಖಂಡರಾದ ರಮೇಶ ದೇಶಪಾಂಡೆ, ಈರಯ್ಯ ಕೋತ, ಶಶಿ ಪಾಟ್ಕರ, ಸಚಿನ ಕಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net