ಆರೋಪಿ ಸ್ಥಾನದಲ್ಲಿದ್ದರೂ ಸಿಎಂ ಕರ್ತವ್ಯ ನಿರ್ವಹಣೆ,  ಯಡಿಯೂರಪ್ಪ ಬಗ್ಗೆ ಎಚ್ಚರಿಕೆಯಿಂದ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ

6-SVR-1 - VIJAYENDRA
Published on

ಸವಣೂರ: ಮುಖ್ಯಮಂತ್ರಿಗಳು ಸದ್ಯ ಆರೋಪಿ ಸ್ಥಾನದಲ್ಲಿದ್ದಾರೆ. ಆದರೂ ಕೆಲಸ ನಿರ್ವಹಿಸುತ್ತಿದ್ದಾರೆ. ಮಾನ್ಯ ಸಿದ್ದರಾಮಯ್ಯನವರೇ ಯಡಿಯೂರಪ್ಪ ಅವರ ಕುರಿತು ಮಾತನಾಡುವಾಗ ಎಚ್ಚರಿಕೆಯಿಂದಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟಾಂಗ್ ಕೊಟ್ಟರು. ಬುಧವಾರ ಸವಣೂರ ಪಟ್ಟಣದಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಕಳೆದ 30-40 ವರ್ಷಗಳಿಂದ ಸುದೀರ್ಘ ಹೋರಾಟ ಮಾಡಿ ಬಡವರು, ರೈತರ ಪರವಾಗಿ ಧ್ವನಿ ಎತ್ತಿ ಸರ್ವರಿಗೂ ಸಮಪಾಲು, ಸಮಬಾಳು ಎಂಬಂತೆ ಸರ್ವತೋಮುಖ ಅಭಿವೃದ್ಧಿಯ ಆಡಳಿತ ನೀಡಿದ್ದಾರೆ. ಯಡಿಯೂರಪ್ಪ ಅವರು ಸಿದ್ದರಾಮಯ್ಯರಂತೆ ಅದೃಷ್ಟದ ಮುಖ್ಯಮಂತ್ರಿಗಳಲ್ಲ. ಸಿದ್ದರಾಮಯ್ಯನವರು ಬಡವರು, ರೈತರ ಪರವಾಗಿ ಹೋರಾಟ ಮಾಡಿಲ್ಲ, ಚಳವಳಿ ಮಾಡಿದವರಲ್ಲ ಎಂದು ಟೀಕಿಸಿದರು.

ಯಡಿಯೂರಪ್ಪನವರ ಸರ್ಕಾರ ಕೊಟ್ಟ ಭಾಗ್ಯಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಸ್ಥಗಿತಗೊಳಿಸಿದೆ. ಕಾಂಗ್ರೆಸ್ ಸರ್ಕಾರ ಬಡವರ ವಿರೋಧಿ. ಕಾಂಗ್ರೆಸ್ ಪಕ್ಷದ್ದು ರೈತ ವಿರೋಧಿ ಸರ್ಕಾರ. ಅಭಿವೃದ್ಧಿ ಶೂನ್ಯ ಸರ್ಕಾರ ಇದು. ಈ ಸರ್ಕಾರ ಬದುಕಿದ್ದೂ ಸತ್ತಂತಿದೆ. ಈ ಭ್ರಷ್ಟ ಸರ್ಕಾರವನ್ನು ಎಷ್ಟು ಬೇಗ ಕಿತ್ತೆಸೆಯುತ್ತೇವೋ ಅಷ್ಟು ಒಳ್ಳೆಯದು ಎಂದರು.

ಕಾಂಗ್ರೆಸ್ ಪಕ್ಷದ ಶಾಸಕ ರಾಜು ಕಾಗೆ ಅವರು, ಸರ್ಕಾರ ಅಭಿವೃದ್ಧಿಗೆ ಹಣ ಕೊಡಲು ಸಾಧ್ಯವಾಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಹೇಳುತ್ತಾರೆ. ಮತ್ತೊಂದು ಕಡೆ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಕೂಡ ಈ ಸರ್ಕಾರಕ್ಕೆ ಆಗುತ್ತಿಲ್ಲ. ಬೆಂಗಳೂರು, ದಾವಣಗೆರೆಯಲ್ಲಿ ಕಾಮಗಾರಿಯ ಹಣ ಸಿಗದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.

ನಿನ್ನೆ ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಸಹಾಯಕನ (ಪಿಎ) ಬೆದರಿಕೆಯಿಂದ ಎಸ್​ಡಿಎ ಆತ್ಮಹತ್ಯೆ ಮಾಡಿಕೊಂಡದ್ದು ವರದಿಯಾಗಿದೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಬಹಿರಂಗವಾಗಿದೆ. ನಿಗಮದಿಂದ ದೋಚಿದ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿಕೊಂಡಿದ್ದಾರೆ ಎಂದರು.

ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕರಾದ ಅಮೃತ ದೇಸಾಯಿ, ವಿರುಪಾಕ್ಷಪ್ಪ ಬಳ್ಳಾರಿ, ಪಿ. ರಾಜೀವ, ಅರುಣಕುಮಾರ ಪೂಜಾರ, ಸವಣೂರ ಬಿಜೆಪಿ ಮಂಡಲದ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ, ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಬಿ.ಎಂ. ಪಾಟೀಲ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಗಾಣಗೇರ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net